ಸುದ್ದಿಮೂಲ ವಾರ್ತೆ
ತುಮಕೂರು, ಅ.27 : ಕ್ರೀಡೆಗಳು ಪ್ರತಿಯೊಬ್ಬ ಮನುಷ್ಯನ ಜೀವನಕ್ಕೆ ಅತ್ಯವಶ್ಯಕವಾಗಿದ್ದು, ಇದರಿಂದ ಮನುಷ್ಯ ಮಾನಸಿಕ ಹಾಗೂ ದೈಹಿಕ ಸದೃಢತೆಯನ್ನು ಕಾಪಾಡಿಕೊಳ್ಳಬಹುದಾಗಿದೆ. ಆದುದರಿಂದ ಸರ್ಕಾರಿ ನೌಕರರು ತಮ್ಮ ಕೆಲಸದ ಒತ್ತಡದ ನಡುವೆಯೂ ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ತಮ್ಮಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಹೊಮ್ಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಗೃಹ ಸಚಿವರಾದ ಜಿ. ಪರಮೇಶ್ವರ್ ತಿಳಿಸಿದರು.
ನಗರದ ಮಹಾತ್ಮಗಾಂಧಿ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಾವೂ ಕೂಡ ಉತ್ತಮ ಕ್ರೀಡಾಪಟುವಾಗಿದ್ದು, ಅಂತರಾಷ್ಟ್ರೀಯ ಚಾಂಪಿಯನ್ಶಿಫ್ನಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿರುವುದಾಗಿ ತಿಳಿಸಿದ ಸಚಿವರು, ಕ್ರೀಡೆ ಇಂದು ಜನಸಮುದಾಯದ ಮನಸ್ಸನ್ನು ಸೆಳೆದಿದೆ. ಮನಸ್ಸಿನ ಏಕಾಗ್ರತೆಗೆ ಕ್ರೀಡೆ ಸಹಕಾರಿಯಾಗಿದೆ ಎಂದರು.
ಸರ್ಕಾರಕ್ಕೆ ಗೌರವ ದೊರಕುವುದು ಸರ್ಕಾರಿ ನೌಕರರು ನಿರ್ವಹಿಸುವ ಕೆಲಸದಿಂದ. ಪ್ರವಾಹ ಆದಂತಹ ಸಂದರ್ಭದಲ್ಲಿ ಮಳೆ ಹಾನಿ, ಪ್ರಾಣ ಹಾನಿ ಪ್ರಕರಣಗಳಿಗೆ ಪರಿಹಾರ ನೀಡುವ ಸಂಬAಧ ಸರ್ಕಾರಿ ನೌಕರರು ತಮ್ಮ ಒಂದು ದಿನದ ವೇತನವನ್ನು ಕೊಡುಗೆಯಾಗಿ ನೀಡಿದ್ದಾರೆ ಮತ್ತು ಕೋವಿಡ್ ಸಂದರ್ಭದಲ್ಲೂ ಸಹ ಎರಡು ಕೋಟಿ ದೇಣಿಗೆಯನ್ನು ಸರ್ಕಾರಿ ನೌಕರರು ನೀಡಿರುವುದನ್ನು ಸಚಿವರು ಸ್ಮರಿಸಿದರು.
ಈ ಕ್ರೀಡಾಕೂಟಕ್ಕೆ ರಾಜ್ಯ ಸರ್ಕಾರ 3.50ಕೋಟಿ ರೂ.ಗಳ ಅನುದಾನವನ್ನು ಒದಗಿಸಿದ್ದು, ಸರ್ಕಾರಿ ನೌಕರರ ಪ್ರತಿಭೆಗಳು ಈ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಹೊರಹೊಮ್ಮುವಂತಾಗಲಿ ಎಂದು ಸಚಿವರು ಆಶಿಸಿದರು.
ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿದರು. ಕಾರ್ಯಕ್ರಮದಲ್ಲಿ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್,ಸುರೇಶ್ ಗೌಡ, ಎಂ.ಟಿ.ಕೃಷ್ಣಪ್ಪ, ಮೇಯರ್ ಪ್ರಭಾವತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಕಾರ್ಯದರ್ಶಿಗಳು ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇನಿ, ಜಿಲ್ಲಾ ಪಂಚಾಯತ್ ಸಿಇಓ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಶೋಕ್ ಕೆ.ವಿ.,ಮಹಾನಗರಪಾಲಿಕೆ ಆಯುಕ್ತೆ ಅಶ್ವಿಜ ಬಿ.ವಿ., ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕನಿರ್ದೇಶಕ ರೋಹಿತ್ ಗಂಗಾಧರ್,ತುಮಕೂರು ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ನರಸಿಂಹರಾಜು ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.