ಸುದ್ದಿಮೂಲ ವಾರ್ತೆ,
ಕೆ.ಆರ್.ಪುರ ಮೇ 30: ಶ್ರೀಬಾವಿಗಂಗಮ್ಮ ದೇವಿಯ ಹೂವಿನ ಕರಗ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಕೆ.ಆರ್.ಪುರದ ಪ್ರಮುಖ ಬೀದಿಗಳಲ್ಲಿ ಹಮ್ಮಿಕೊಂಡಿದ್ದ ಶಿರಸ್ಸು ಮೆರವಣಿಗೆ ಅದ್ದೂರಿಯಾಗಿ ನಡೆಯಿತು.
ಕೆ.ಆರ್.ಪುರ ಮುನಿಯಪ್ಪ ಬಡಾವಣೆ, ಕೆ.ಟಿ.ವೆಂಕಟಪ್ಪ ಬಡಾವಣೆ, ಕುಂಬಾರ ಬೀದಿ, ಹಳೇ ಪೊಲೀಸ್ ಠಾಣೆ ರಸ್ತೆ, ಕೆ.ಆರ್ ಪುರ, ಟ್ಯಾಂಕರ್ ರಸ್ತೆ, ಸರ್ಕಾರಿ ಪದವಿ ಪೂರ್ವ ಕಾಲೇಜು, ಯುಬಿ ಬಡಾವಣೆ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಶ್ರೀ ಬಾವಿ ಗಂಗಮ್ಮ ದೇವಿ ಶಿರಸ್ಸು ಮಹೋತ್ಸವದ ಮೆರವಣಿಗೆ ನಡೆಯಿತು.
ಪ್ರಮುಖ ಬೀದಿಗಳಲ್ಲಿ ನಡೆದ ಮಹೋತ್ಸವದದಲ್ಲಿ ದೇವಿಗೆ ಗ್ರಾಮಸ್ಥರು ಶ್ರದ್ಧಾಭಕ್ತಿಯಿಂದ ವಿಶೇಷ ಪೂಜೆ ನೆರೆವೇರಿಸಿ ದೇವರ ಕೃಪೆಗೆ ಪಾತ್ರರಾದರು. ಶ್ರೀಗಂಗಮ್ಮದೇವಿ ಮಹೋತ್ಸವದ ಅಧ್ಯಕ್ಷ ಕೆ.ಟಿ.ರಾಜಕುಮಾರ್ ಹಾಗೂ ಕೆ.ಆರ್.ಪುರದ ಗ್ರಾಮಸ್ಥರು ನೇತೃತ್ವದಲ್ಲಿ ಮಂಗಳವಾರ ದೇವಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಿದ ಬಳಿಕ ಬೆಳಿಗ್ಗೆ 6:30ಕ್ಕೆ ಆರಂಭವಾದ ದೇವಿಯ ಶಿರಸ್ಸು ಮಹೋತ್ಸವ ಮೆರವಣಿಗೆ ಮಧ್ಯಾಹ್ನ 12:30ಕ್ಕೆ ಮುಕ್ತಾಯಗೊಂಡಿತು.
ಮಧ್ಯಾಹ್ನ 12:30 ರಿಂದ 1 ಗಂಟೆಯವರೆಗೆ ದೇವರಿಗೆ ತಂಬಿಟ್ಟು ಆರತಿ ನೆರವೇರಿತು. ನಂತರ ಮಧ್ಯಾಹ್ನ ಒಂದು ಗಂಟೆಯಿಂದ ರಾತ್ರಿ 7:30 ವರೆಗೂ ಭಕ್ತರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ.ಕೆ.ಮೋಹನ್, ಪಲಮನೇರ್ ಗಜೇಂದ್ರ, ಮುಖಂಡರಾದ ಡಿ.ಕೆ.ರಮೇಶ್ ಬಾಬು, ಚಿದಂಬರ್ ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.