ಎರಡನೇ ದಿನವೂ ಸ್ವಚ್ಛ ಮಂತ್ರಾಲಯ ಅಭಿಯಾನ
ಅರವಿಂದ ಲಿಂಬಾವಳಿ ನೇತೃತ್ವದ ತಂಡಕ್ಕೆ ಶ್ರೀಸುಬುಧೇಂದ್ರ ಸ್ವಾಮಿಗಳ ಮೆಚ್ಚುಗೆ
ಸುದ್ದಿಮೂಲ ವಾರ್ತೆ
ರಾಯಚೂರು,ಸೆ.26: ಮಂತ್ರಾಲಯದ ಶ್ರೀಗುರು ರಾಘವೇಂದ್ರ ಮಠದ ಆವರಣದಲ್ಲಿ ನಡೆಯುತ್ತಿರುವ ಸ್ವಚ್ಛ ಮಂತ್ರಾಲಯ ಅಭಿಯಾನ ಎರಡನೇ ದಿನವೂ ಮಂತ್ರಾಲಯದ ವಿವಿಧ ಭಾಗಗಳಲ್ಲಿ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಎಂಟು ನೂರಕ್ಕೂ ಹೆಚ್ಚು ಕಾರ್ಯಕರ್ತರ ಕರಸೇವಕರ ತಂಡಗಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದವು.
ಪ್ರತಿ ವರ್ಷದಂತೆ ನಡೆಯುವ ಮಂತ್ರಾಲಯದ ರಾಯರ ಆರಾಧನ ಇದೇ ಸೆಪ್ಟೆಂಬರ್ ತಿಂಗಳಲ್ಲಿ ನಡೆದು ಅಪಾರ ಭಕ್ತ ಸಮೂಹ ಸೇರಿತ್ತು. ಲಕ್ಷಾಂತರ ಭಕ್ತರು ಸೇರುವ ಮಠದ ಆವರಣದ ವಿವಿಧ ಭಾಗಗಳಲ್ಲಿ ಕಸ ಸಂಗ್ರಹಗೊಂಡಿತ್ತು. ಕಸ ನಿರ್ವಹಣೆ ಮಾಡುವ ಉದ್ದೇಶದಿಂದ ಮಂತ್ರಾಲಯದ ಅಭಿವೃದ್ಧಿ ಸಮಿತಿ ಸದಸ್ಯರು ಹಾಗೂ ಮಾಜಿ ಶಾಸಕರು ಆದ ಅರವಿಂದ ಲಿಂಬಾವಳಿ ನೇತೃತ್ವದಲ್ಲಿ ಸ್ವಚ್ಛ ಮಂತ್ರಾಲಯ ಅಭಿಯಾನ ಹಮ್ಮಿಕೊಳ್ಳಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಸ್ವಚ್ಛ ಭಾರತ ಪರಿಕಲ್ಪನೆಯಿಂದಾಗಿ ಭಾರತದ ಧಾರ್ಮಿಕ ಮತ್ತು ತೀರ್ಥ ಕ್ಷೇತ್ರಗಳನ್ನು ಸ್ವಚ್ಛಗೊಳಿಸುವ ಉದ್ದೇಶದಿಂದ ಮಹದೇವಪುರ ನಮ್ಮ ಕಾರ್ಯಕರ್ತರ ಕಸ ಸೇವಕರ ತಂಡ ಮಠದ ವಿವಿಧ ಭಾಗಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಿದೆ. ಸ್ವಚ್ಛತೆಯಲ್ಲಿ ತೊಡಗಿರುವ ಕರ ಸೇವಕರ ಉತ್ಸಾಹ ಮತ್ತು ಬದ್ಧತೆಗೆ ಕಾರಣವಾಗಿದೆ ಎಂದು ಸ್ವಚ್ಛ ಮಂತ್ರಾಲಯ ಆಯೋಜಕ ಮಾಜಿ ಶಾಸಕ ಅರವಿಂದ ಹೇಳಿದರು.
ಕರ ಸೇವಕರ ತಂಡ ತುಂಗಭದ್ರಾ ನದಿ ತೀರ, ಪರಿಮಳ ಪ್ರಸಾದ ಕೇಂದ್ರ, ಮಠದ ಅಂಗಳ, ಪಾಕ ಶಾಲೆ, ಗೋಶಾಲೆ, ಬಸ್ ನಿಲ್ದಾಣ, ಗಾರ್ಡನ್, ವಾಹನಗಳ ಪಾರ್ಕಿಂಗ್ ಪ್ರದೇಶ, ಭಕ್ತರು ದರ್ಶನ ಮಾಡುವ ಸ್ಥಳ, ವಸತಿ ಪ್ರದೇಶಗಳ ಮುಂಭಾಗದ ಚರಂಡಿ ಮುಂತಾದ ಪ್ರಮುಖ ಬೀದಿಗಳನ್ನು ಸ್ವಚ್ಛತೆ ಕಾರ್ಯ ಕೈಗೊಂಡಿತು.
ಮಂತ್ರಾಲಯದ ವಿವಿಧ ಭಾಗಗಳಲ್ಲಿ ನಿನ್ನೆ ಕೈಗೊಂಡ ಸ್ವಚ್ಛತಾ ಕಾರ್ಯದ ಸ್ಥಳಗಳಗೆ ಪೀಠಾಧಿಪತಿಗಳಾದ ಶ್ರೀಸುಬುಧೇಂದ್ರ ಸ್ವಾಮಿಗಳು ಭೇಟಿ ನೀಡಿ ಕರ ಸೇವಕರ ತಂಡಗಳಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಮನೋಹರ ರೆಡ್ಡಿ, ಗ್ರಾಮಾಂತರ ಅಧ್ಯಕ್ಷ ನಟರಾಜ್, ವೆಂಕಟಸ್ವಾಮಿರೆಡ್ಡಿ, ಮಹೇಂದ್ರಮೋದಿ, ರಾಜೇಶ್, ಹೂಡಿ ಪಿಳ್ಳಪ್ಪ, ಬಿದರಹಳ್ಳಿ ರಾಜೇಶ್, ಅಶೋಕ್, ಚನ್ನಸಂದ್ರ ಚಂದ್ರಶೇಖರ್ ಇದ್ದರು.