ದಾವಣಗೆರೆ.ಜೂ.5:ಜುಲೈ 3 ರಿಂದ ರಾಜ್ಯ ಬಜೆಟ್ ಅಧಿವೇಶನ ಆರಂಭವಾಗಲಿದ್ದು 7 ರಂದು ಬಜೆಟ್ ಮಂಡಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಹೇಳಿದರು
ದಾವಣಗೆರೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟ ಸಭೆಯಲ್ಲಿ ಬಜೆಟ್ ಗಾತ್ರ ಮತ್ತು ಅಧಿವೇಶನ ಅವದಿಯ ಬಗ್ಗೆ ತೀರ್ಮಾನ ಕೈಗೊಳ್ಳ ಲಾಗುವುದು ಎಂದರು.
ಬಜೆಟ್ ಮಂಡನೆಯ ಬಳಿಕ ಒಂದು ವಾರಗಳ ಕಾಲ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದೆ.ಹಿಂದಿನ ಸರ್ಕಾರ ಮಂಡಿಸಿದ್ದ ಬಜೆಟ್ ಗಾತ್ರ 3 ಲಕ್ಷದ 9 ಸಾವಿರದ 782 ಕೋಟಿರೂಪಾಯಿ ಎಂದರು.
ಗೋ ಹತ್ಯೆ ನಿಷೇಧ ವಾಪಾಸು ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈ ಗೊಳ್ಳಲಾಗುವುದು.12 ವರ್ಷ ದಾಟಿದ ಮತ್ತು ಬರಡು ರಾಸುಗಳು ಹಾಗೂ ವ್ಯವಸಾಯಕ್ಕೆ ಉಪಯೋಗವಿಲ್ಲದ ರಾಸುಗಳ ಕುರಿತು 1964 ರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದ ಎಂದರು.
ರಾಜ್ಯದಲ್ಲಿ ಮುಂಗಾರು ಹಂಗಾಮಿನಲ್ಲಿ ಬೀಜ ಬಿತ್ತನೆ ಮತ್ತು ರಸಗೊಬ್ಬರ ವಿತರಣೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ವಹಿಸಲು ಎಲ್ಲ ಜಿಲ್ಲಾ ಮಟ್ಟದ ಕೃಷಿ ಅಧಿಕಾರಿಗಳಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸೂಚನೆ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಗಣಿ, ಭೂ ವಿಜ್ಞಾನ ಮತ್ತು ತೋಟಗಾರಿಕಾ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಉಪಸ್ಥಿತರಿದ್ದರು.