ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಆ. 2 : ದೇಸಿ ಕ್ರೀಡೆಯಾದ ಖೋಖೋ ಆಟವು ದೈಹಿಕ ಮತ್ತು ಮಾನಸಿಕ ಸದೃಢತೆಗೆ ಸಹಕಾರಿಯಾಗಿದೆ. ರಾಜ್ಯ ಮಟ್ಟದ ಖೋ-ಖೋ ಪಂದ್ಯಾವಳಿಯನ್ನು ಆಯೋಜಿಸಿದ್ದು, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಅನಂತ ವಿದ್ಯಾನಿಕೇತನ ಶಾಲೆಯ ಕಾರ್ಯದರ್ಶಿ ಕೆಂಪೇಗೌಡ ತಿಳಿಸಿದರು.
ದೇವನಹಳ್ಳಿ ತಾಲೂಕಿನ ಅತ್ತಿಬೆಲೆ ಬಳಿಯ ಅನಂತ ವಿದ್ಯಾನಿಕೇತನ ಶಾಲೆಯಲ್ಲಿ ಆಯೋಜಿಸಿದ್ದ ರಾಜ್ಯ ಕೌನ್ಸಿಲ್ ಸ್ಕೂಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಪಂದ್ಯಾವಳಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಜ್ಯ ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ರಾಜ್ಯದ 25 ಶಾಲೆಗಳಿಂದ 173 ತಂಡಗಳು ಭಾಗವಹಿಸಲಿದ್ದು ತಾಲ್ಲೂಕಿನ ಅನಂತವಿದ್ಯಾನಿಕೇತನ ಶಾಲಾ ಆವರಣದಲ್ಲಿ ಕೌನ್ಸಿಲ್ ಸ್ಕೂಲ್ ಸ್ಪೋರ್ಟ್ಸ್ ಮತ್ತು ಗೇಮ್ಸ್ ಸಹಯೋಗದೊಂದಿಗೆ ನಡೆಸುತ್ತಿದೆ. ಕ್ರೀಡಾಪಟುಗಳಿಗೆ ಬೇಕಾದ ಮೂಲಸೌಕರ್ಯವನ್ನು ನೀಡುವ ಮೂಲಕ ಸುಸಜ್ಜಿತವಾಗಿ ನಡೆಯುತ್ತಿದೆ.
ಖೋ ಖೋ ಫೆಡರೇಷನ್ ವತಿಯಿಂದ ನಮ್ಮ ಶಾಲಾ ಆವರಣದಲ್ಲಿ ರಾಜ್ಯಮಟ್ಟದ ಪಂದ್ಯಾವಳಿ ಆಯೋಜಿಸಿದ್ದು, ತೀರ್ಪುಗಾರರು ಫೆಡರೇಶನ್ ನಿಂದ ಆಗಮಿಸಿದ್ದಾರೆ. ಭಾಗವಹಿಸಿರುವ ಕ್ರೀಡಾಪಟುಗಳಿಗೆ ಈ ಕ್ರೀಡೆ ದೇಸೀ ಕ್ರೀಡೆಯಾಗಿದ್ದು ಇದನ್ನು ಮುಂದಿನ ಪೀಳಿಗೆ ಮುಂದುವರೆಸಲು ಉತ್ತೇಜನ ನೀಡಲಾಗುತ್ತಿದೆ. ಕ್ರಿಕೆಟ್ ಒಂದಕ್ಕೇ ಸೀಮಿತಗೊಳಿಸದೇ ಇತರೆ ದೇಸೀ ಕ್ರೀಡೆಗೂ ಒತ್ತು ನೀಡಬೇಕೆಂದು ಸಲಹೆ ನೀಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ 14, 17 ಮತ್ತು 19 ವರ್ಷ ವಯೋಮಿತಿಯ ಕ್ರೀಡಾಪಟುಗಳಿಗೆ ಖೋಖೋ ಪಂದ್ಯಾವಳಿಯಲ್ಲಿ ಭಾಗವಹಿಸಲು ಅವಕಾಶವಿದೆ. ನಾಲ್ಕು ದಿನದ ಕ್ರೀಡಾಕೂಟದಲ್ಲಿ ರಾಜ್ಯದ ಸಾಕಷ್ಟು ಶಾಲೆಗಳು ಭಾಗವಹಿಸಿದೆ.
ಇದೇ ಸಂದರ್ಭದಲ್ಲಿ ಅನಂತ ವಿದ್ಯಾನಿಕೇತನ ಶಾಲೆಯ ಟ್ರಸ್ಟಿ ಗ್ರೀಷ್ಮಾ ನಾಗರಾಜ್, ಪ್ರಾಂಶುಪಾಲ ಪದ್ಮಜಾ ವೈದ್ಯನಾಥನ್, ತ್ಯಾಗರಾಜ್, ಬಸವರಾಜು ಹಾಗೂ ಐ.ಸಿ.ಎಸ್.ಸಿ ಶಾಲೆಗಳ ಕ್ರೀಡಾ ಪಟುಗಳು ಶಿಕ್ಷಕ ವೃಂದ ಹಾಜರಿದ್ದರು.