ಸುದ್ದಿಮೂಲ ವಾರ್ತೆ
ಬೆಂಗಳೂರು, ನ.10: ಪಕ್ಷ ಸಂಘಟನೆ ಸೇರಿದಂತೆ ರಾಜ್ಯ ಬಿಜೆಪಿ ಘಟಕದ ಬಗ್ಗೆ ಅತೀವ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಬಿಜೆಪಿ ಹೈಕಮಾಂಡ್ ವಿರುದ್ಧ ಮತ್ತೊಮ್ಮೆ ತಮ್ಮ ಅಸಮಾಧಾನ ತೋಡಿಕೊಂಡಿರುವ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ, ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸೂಚ್ಯವಾಗಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ನಾಯಕರ ಬಗ್ಗೆ ನಿಷ್ಕಾಳಜಿ ಸಲ್ಲದು. ಪಕ್ಷದ ಹಿತದೃಷ್ಟಿಯಿಂದ ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಕೇಂದ್ರ ನಾಯಕರಿಗೆ ಮನವಿ ಮಾಡಿಕೊಳ್ಳುವುದಾಗಿ ಹೇಳಿದರು.
ಬಿಜೆಪಿ ವಿಧಾನಸಭಾ ಚುನಾವಣೆಯಲ್ಲಿ ಸೋತಿರಬಹುದು, ಆದರೆ, ಲೋಕಸಭಾ ಚುನಾವಣೆಯಲ್ಲಿ ಗೆಲ್ಲುವ ಅಗತ್ಯವಿದೆ. ಹೀಗಾಗಿ ದಯವಿಟ್ಟು ರಾಜ್ಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ರಾಜ್ಯಕ್ಕೆ ಭೇಟಿ ನೀಡದಿರುವುದು ಮತ್ತು ವಿಪಕ್ಷ ನಾಯಕನನ್ನು ಆಯ್ಕೆ ಮಾಡದಿರುವ ನಿರ್ಧಾರ ಸರಿಯಲ್ಲ ಎಂದರು.
ಚುನಾವಣಾ ರಾಜಕೀಯದಿಂದ ನಿವೃತ್ತಿ ಕುರಿತು ಮಾತನಾಡಿದ ಗೌಡರು, ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುವ ತಮ್ಮ ನಿರ್ಧಾರಕ್ಕೆ ಯಾರಿಂದಲೂ ಒತ್ತಡವಿಲ್ಲ. “ಹನುಮಂತನಂತೆ ನನ್ನ ಹೃದಯವನ್ನು ತೆರೆದು ತೋರಿಸಲು ಸಾಧ್ಯವಿಲ್ಲ. ನಾನು ಸತ್ಯವನ್ನೇ ಹೇಳಿದ್ದೇನೆ ಮತ್ತು ನಾನು ಯಾವುದೇ ನಾಯಕರೊಂದಿಗೆ ಈ ವಿಷಯವನ್ನು ಚರ್ಚಿಸಿಲ್ಲ ಎಂದು ಸ್ಪಷ್ಪಪಡಿಸಿದರು.
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸಬೇಕೆಂದು ಪಕ್ಷ ಮತ್ತು ಆರ್ಎಸ್ಎಸ್ ಬಯಸಿದೆ. ನಾನು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ ಮತ್ತು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ನಾನು ಎಂದಿಗೂ ರಾಜಕೀಯದಲ್ಲಿ ದಡ್ಡನಲ್ಲ” ಎಂದರು.
ನಿವೃತ್ತಿಯಾಗುವಂತೆ ಪಕ್ಷದ ವರಿಷ್ಠರು ನೇರವಾಗಿಯೇ ಸೂಚಿಸಿದ್ದಾರೆ ಎಂಬ ಯಡಿಯೂರಪ್ಪ ಹೇಳಿಕೆ ಕುರಿತು ಪ್ರತಿಕ್ರಿಯೆ ನಿಡಿದ ಸದಾನಂದಗೌಡರು. ಯಡಿಯೂರಪ್ಪ ಅವರು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸ್ಪಷ್ಟನೆ ನೀಡಿದ್ದು, ಚುನಾವಣೆಗೆ ಸ್ಪರ್ಧಿಸದಂತೆ ತಮ್ಮ ಮೇಲೆ ಯಾವುದೇ ಒತ್ತಡವಿಲ್ಲ ಎಂದು ತಿಳಿಸಿದರು.
ಸದಾನಂದ ಗೌಡರು ಯಾವುದೇ ನಾಯಕರ ಗುಲಾಮರಲ್ಲ. ಒತ್ತಡದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಿಲ್ಲ. ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ ಮತ್ತು ನನ್ನ ಜವಾಬ್ದಾರಿಯನ್ನು ಅರಿತುಕೊಂಡಿದ್ದೇನೆ. ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ 32 ಲಕ್ಷ ಮತದಾರರಿದ್ದಾರೆ. ಯಾವುದೇ ಮತದಾರ ನನ್ನದು ತಪ್ಪು ಎಂದು ಹೇಳಿದರೆ ಬೆಂಗಳೂರು ನಗರ ಬಿಟ್ಟು ಹೋಗುತ್ತೇನೆ ಎಂದು ಸವಾಲು ಹಾಕಿದರು.