ಸುದ್ದಿಮೂಲ ವಾರ್ತೆ
ಬೆಂಗಳೂರು, ನ. 19 : ರಾಜ್ಯವು ಅನೇಕ ಶ್ರೇಷ್ಠ ಕ್ರೀಡಾ ಪಟುಗಳನ್ನು ನಿರ್ಮಿಸಿದೆ. ಜಾಗತಿಕ ಮಟ್ಟದಲ್ಲಿ ರಾಜ್ಯ ಮತ್ತು ದೇಶಕ್ಕೆ ಕೀರ್ತಿ ತಂದವರು. ಆ ಆಟಗಾರರಿಂದ ಸ್ಫೂರ್ತಿ ಪಡೆದು ಮುನ್ನಡೆಯಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ನಗರದ ಗಾಲ್ಫ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಗವರ್ನರ್ ಕಪ್ ಪ್ರಶಸ್ತಿ ವಿತರಣೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಕ್ರೀಡಾ ಸಚಿವಾಲಯವು ಅನೇಕ ಕ್ರೀಡಾ ಚಟುವಟಿಕೆಗಳಿಗೆ ಪರಿಣಾಮಕಾರಿ ಯೋಜನೆಗಳನ್ನು ಸಿದ್ಧಪಡಿಸುತ್ತಿದೆ. ರಾಜ್ಯ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುತ್ತಿದೆ. ವಿವಿಧ ಹಂತಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಪುರಸ್ಕರಿಸುವುದರೊಂದಿಗೆ, ಆಟಗಾರರಿಗೆ ಆಧುನಿಕ ಕ್ರೀಡಾ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತಿದೆ ಎಂದು ಹೇಳಿದರು.
1876 ರಲ್ಲಿ ಸ್ಥಾಪನೆಯಾದ ಬೆಂಗಳೂರು ಗಾಲ್ಫ್ ಕ್ಲಬ್ ಬಹಳ ಹಳೆಯ ಇತಿಹಾಸವನ್ನು ಹೊಂದಿದೆ. ಗಾಲ್ಫ್ ಕ್ಲಬ್ ಗಾಲ್ಫ್ ಆಟಗಾರರಿಗೆ ಮಾತ್ರವಲ್ಲದೆ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಿದೆ. ಗಾಲ್ಫ್ ಆಟವು ಭಾರತದಲ್ಲಿ ಮತ್ತು ಪ್ರಪಂಚದ ಅನೇಕ ಭಾಗಗಳಲ್ಲಿ ಜನಪ್ರಿಯ ಆಟವಾಗಿದೆ. ಇಂದು ದೇಶದ ಯುವಕರು ಕೂಡ ಈ ಕ್ರೀಡೆಯನ್ನು ತಮ್ಮ ವೃತ್ತಿಯನ್ನಾಗಿಸಿಕೊಳ್ಳುತ್ತಿದ್ದಾರೆ. 1970ರಲ್ಲಿ ಬೆಂಗಳೂರು ಗಾಲ್ಫ್ ಕ್ಲಬ್ ಆರಂಭಿಸಿದ ಗವರ್ನರ್ ಕಪ್ ಟೂರ್ನಿ ಇಂದು ಪ್ರಮುಖ ಟೂರ್ನಿಯಾಗಿರುವುದು ಸಂತಸ ತಂದಿದೆ ಎಂದರು.
ಇದರಲ್ಲಿ, ಕ್ಲಬ್ ಸದಸ್ಯರು, ಹೊರಗಿನ ಅತ್ಯುತ್ತಮ ಆಟಗಾರರ ಜೊತೆಗೆ, ಪ್ರಪಂಚದಾದ್ಯಂತದ ಗಾಲ್ಫ್ ಆಟಗಾರರು ಉತ್ಸಾಹ ಮತ್ತು ಸ್ಪರ್ಧಾತ್ಮಕ ಮನೋಭಾವದಿಂದ ಭಾಗವಹಿಸುತ್ತಾರೆ. ಇದು ಈ ಟೂರ್ನಿಯ ವೈಶಾಲ್ಯತೆಯನ್ನು ತೋರಿಸುತ್ತದೆ. ಬೆಂಗಳೂರು ಗಾಲ್ಫ್ ಕ್ಲಬ್ ಮಹಿಳಾ ವಿಶ್ವ ದಿನದಂದು ಮಹಿಳಾ ಗಾಲ್ಫ್ ಆಟಗಾರರಿಗಾಗಿ ಪಂದ್ಯಾವಳಿಯನ್ನು ಸಹ ಆಯೋಜಿಸುತ್ತದೆ. ಈ ಗಾಲ್ಫ್ ಕ್ಲಬ್ ನಿಂದ ತರಬೇತಿ ಪಡೆದಿರುವ ಅದಿತಿ ಅಶೋಕ್ ಚೀನಾದಲ್ಲಿ ನಡೆದ ಏಷ್ಯನ್ ಗೇಮ್ಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಈ ಕ್ಲಬ್ ದೇಶಕ್ಕೆ ಹಾಗೂ ವಿಶ್ವಕ್ಕೆ ಹೆಮ್ಮೆ ತಂದಿರುವುದು ಹೆಮ್ಮೆಯ ಸಂಗತಿ ಎಂದು ಪ್ರಶಂಸಿದರು.
ಬೆಂಗಳೂರು ಗಾಲ್ಫ್ ಕ್ಲಬ್ನ ಕ್ಯಾಪ್ಟನ್ ಡಿ.ಎನ್ ವಸಂತ್ ಕುಮಾರ್, ಕಾರ್ಯದರ್ಶಿ, ವಿಟ್ಟಲ್ ಬೆಳ್ಳಂದೋರ್, ಖಜಾಂಚಿ ಶ್ರೀ ಫಾರೂಕ್ ಅಹಮದ್, ಪಂದ್ಯಾವಳಿಯ ಅಧ್ಯಕ್ಷರಾದ ಆರ್.ಎನ್. ಶಶಾಂಕ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.