ಸುದ್ದಿಮೂಲ ವಾರ್ತೆ
ಬೆಂಗಳೂರು, ಅ. 08 : ಇಂಧನದಲ್ಲಿ ಸ್ವಾವಲಂಬನೆ ಸಾಧಿಸಲು ಭಾರತಕ್ಕೆ 2047 ರ ಗುರಿಯನ್ನು ನಿಗದಿಪಡಿಸಲಾಗಿದೆ. ಈ ಗುರಿಯನ್ನು ಸಾಧಿಸಲು ಸಕ್ರಿಯ ಪ್ರಯತ್ನಗಳನ್ನು ಮಾಡಬೇಕಾಗುತ್ತದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದ್ದಾರೆ.
ನಿಟ್ಟೆ ಮೀನಾಕ್ಷಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ರಾಷ್ಟ್ರೀಯ ಹೈಡ್ರೋಜನ್ ಮತ್ತು ಇಂಧನ ಕೋಶ ದಿನ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶುದ್ಧ ಮತ್ತು ಹಸಿರು ಶಕ್ತಿಗಾಗಿ ಸುಧಾರಿತ ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಭಾರತ ಅಭಿವೃದ್ಧಿಶೀಲ ರಾಷ್ಟ್ರ. ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಲು ಉನ್ನತ ಬೆಳವಣಿಗೆಯ ಕಾರ್ಯತಂತ್ರವನ್ನು ಕೈಗೊಂಡಿದೆ. ಇಂಗಾಲ ಮುಕ್ತ ಇಂಧನವನ್ನು ಉತ್ಪಾದಿಸುವ ಯೋಜನೆಗಳನ್ನು ವೇಗಗೊಳಿಸಲು ರಾಷ್ಟ್ರೀಯ ಹೈಡ್ರೋಜನ್ ಮಿಷನ್ ಅನ್ನು ಪ್ರಾರಂಭಿಸುವುದಾಗಿ ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು ಎಂದು ಸ್ಮರಿಸಿದರು.
ವೃತ್ತಿಪರ ಶಿಕ್ಷಣದಲ್ಲಿ ಉತ್ಕೃಷ್ಟತೆಯನ್ನು ನೀಡುವ ನಿಟ್ಟಿನಲ್ಲಿ ಶ್ಲಾಘನೀಯ ಕೆಲಸವನ್ನು ಮಾಡುತ್ತಿರುವ ಈ ಸಂಸ್ಥೆಯು ಕರ್ನಾಟಕದ ಉನ್ನತ ಎಂಜಿನಿಯರಿಂಗ್ ಸಂಸ್ಥೆಗಳಲ್ಲಿ ಒಂದಾಗಿದೆ. ಪ್ರಸ್ತುತ ಸಂಸ್ಥೆಯು ಸಮುದ್ರದ ನೀರಿನಿಂದ ಹಸಿರು ಜಲಜನಕವನ್ನು ಉತ್ಪಾದಿಸುವ ಯೋಜನೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಯೋಜನೆಗಾಗಿ ಸಂಸ್ಥೆಯು ಲಾಭದ ಉದ್ದೇಶವಿಲ್ಲದ ಸಂಸ್ಥೆಯಾದ ಉದ್ಜನ್ನೊಂದಿಗೆ ಕೆಲಸ ಮಾಡುತ್ತಿದೆ ಎಂದು ಹೇಳಿದರು.
2030 ರ ವೇಳೆಗೆ 8 ಲಕ್ಷ ಕೋಟಿ ರೂಪಾಯಿಗಳ ಹೂಡಿಕೆಯನ್ನು ಸಾಧಿಸುವ ಗುರಿಯನ್ನು ಹೊಂದಿದ್ದು, ಇದು 6 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಸಾಧ್ಯತೆಯಿದೆ. ಸಾರಿಗೆ ವಲಯವು ಹಸಿರುಮನೆ ಅನಿಲ ಹೊರಸೂಸುವಿಕೆಯ ಅತಿದೊಡ್ಡ ಮೂಲಗಳಲ್ಲಿ ಒಂದಾಗಿದೆ. ಹೈಡ್ರೋಜನ್ ಇಂಧನದ ಬಳಕೆಯು ಡೀಸೆಲ್-ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡುತ್ತದೆ ಮತ್ತು ಇದು ಕಚ್ಚಾ ತೈಲದ ಆಮದಿನ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಡಾ.ಎಚ್.ಸಿ.ನಾಗರಾಜ್, ನಿರ್ದೇಶಕ ಕೆ.ಬಿ ರಾವ್, ಆಡಳಿತಾಧಿಕಾರಿ ರೋಹಿತ್ ಪೂಂಜಾ, ವಿಪ್ರೋ ಮಾಜಿ ಅಧ್ಯಕ್ಷರು ಮತ್ತು ಉದ್ಜನ್ ಸಂಸ್ಥೆಯ ಅಧ್ಯಕ್ಷರು ಹೆಚ್ ಬಿ ನಾಯಕ್, ಪ್ರೊಫೆಸರ್ ಪ್ರಹ್ಲಾದ್ ಟೆಂಗಲಿ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.