ಸುದ್ದಿಮೂಲ ವಾರ್ತೆ
ಮೈಸೂರು, ಅ. 25:ನಗರದ ರಾಮಕೃಷ್ಣ ನಗರದಲ್ಲಿ ತೋಟಗಾರಿಕೆ ಇಲಾಖೆಯ ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟವನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು.
ಲಿಂಗಾಂಬುಧಿ ಸಸ್ಯ ಶಾಸ್ತ್ರೀಯ ತೋಟವು ಹಲವು ವಿಶೇಷತೆಗಳ ಆಗರ. ಸಸ್ಯಶಾಸ್ತ್ರ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಜೊತೆಗೆ ಆನೇಕ ವಿಸ್ಮಯಗಳಿಂದ ಕೂಡಿದ ಅಪರೂಪದ ತೋಟವಿದು. 15 ಎಕರೆ ವಿಸ್ತೀರ್ಣವನ್ನು ಒಳಗೊಂಡಿದ್ದು, ಇದು 2012 ರಲ್ಲಿ ಆರಂಭಗೊಂಡು 2023ರಲ್ಲಿ ಪೂರ್ಣಗೊಂಡಿತು. ತೋಟದ ಒಟ್ಟಾರೆ ಅಭಿವೃದ್ಧಿ ಮತ್ತು ನಿರ್ವಹಣೆ ವೆಚ್ಚ 5.60 ಕೋಟಿ ರು.ಗಳು, ಒಟ್ಟು 290 ಸಸ್ಯ ಪ್ರಭೇದಗಳನ್ನು ಇಲ್ಲಿ ಕಾಣಬಹುದು. ಇಂದು ಲಾಲ್ ಬಾಗ್ ಅನ್ನು ಒಳಗೊಂಡಂತೆ ತೋಟಗಾರಿಕೆ ಇಲಾಖೆಯು ಅಭಿವೃದ್ಧಿಪಡಿಸಿರುವ ಕರ್ನಾಟಕದ ನಾಲ್ಕನೇ ಸಸ್ಯ ಶಾಸ್ತ್ರೀಯ ತೋಟವಾಗಿದೆ.
ಮೈಸೂರು ನಗರ ಮತ್ತು ಜಿಲ್ಲೆಯ ಪ್ರಪ್ರಥಮ ಸಸ್ಯ ಶಾಸ್ತ್ರೀಯ ತೋಟವೆಂಬ ಹೆಗ್ಗಳಿಕೆಯನ್ನು ಲಿಂಗಾಂಬುದಿ ಸಸ್ಯ ಶಾಸ್ತ್ರಿಯ ತೋಟ ಪಡೆದುಕೊಂಡಿದೆ.
ದೇಶ ವಿದೇಶದ ಸಸ್ಯ ಪ್ರಭೇದಗಳ ಪರಿಚಯ ಸ್ಥಳೀಯ ವಾತಾವರಣಕ್ಕೆ ಒಗ್ಗಿಸುವಿಕೆ, ಸಂರಕ್ಷಣೆ, ಸಸ್ಯಾಭಿವೃದ್ಧಿ ಮತ್ತು ಪ್ರಸರಣ ಕೈಗೊಳ್ಳುವುದು. ಸ್ಥಳೀಯ ಸಸ್ಯ ಪ್ರಭೇದಗಳು ಅಪರೂಪದ ಅಳಿವಿನಂಚಿನಲ್ಲಿರುವ ಹಾಗೂ ವಿನಾಶದ ಅಂಚಿನಲ್ಲಿರುವ ಸಸ್ಯ ಪ್ರಭೇದಗಳ ಪರಿಚಯ ಸಂರಕ್ಷಣೆ ಮತ್ತು ಸಸ್ಯಾಭಿವೃದ್ಧಿಗೆ ವಿಶೇಷ ಒತ್ತು ನೀಡುವುದು ಈ ತೋಟದ ವಿಶೇಷ.
ಸಸ್ಯ ಸಂರಕ್ಷಣೆಯ ಜೊತೆ ಜೊತೆಗೆ ಪ್ರಾಣಿ ಮತ್ತು ಪಕ್ಷಿ ಸಂಕುಲಕ್ಕೆ ವಿಶೇಷ ಒತ್ತು ನೀಡುವುದು. ವಿವಿಧ ಸಸ್ಯ ಪ್ರಭೇದಗಳ ನಿಖರ ಗುರುತಿಸುವಿಕೆ ಮತ್ತು ದಾಖಲಾತಿಗಾಗಿ ಹರ್ಬೇರಿಯಂ ಸ್ಥಾಪಿಸುವುದು. ಸಸ್ಯ ಪ್ರಭೇದಗಳ ಸಮಗ್ರ ಮಾಹಿತಿಯನ್ನು ದಾಖಲಿಸುವ ವೈಜ್ಞಾನಿಕ ಸಸ್ಯ ಕೇಂದ್ರವನ್ನಾಗಿಸುವ ಗುರಿ ಹೊಂದಲಾಗಿದೆ.
ಸಸ್ಯ ಪ್ರಭೇದಗಳ ಬಗ್ಗೆ ಅಭ್ಯಸಿಸಲು ವಿದ್ಯಾರ್ಥಿಗಳು, ಪರಿಸರ ಪ್ರಿಯರು, ಸಸ್ಯ ಶಾಸ್ತ್ರೀಯ ಆಸಕ್ತರು, ಸಸ್ಯ ವರ್ಗೀಕರಣ ಆಸಕ್ತರಿಗೆ ವೈಜ್ಞಾನಿಕ ವೇದಿಕೆಯನ್ನು ಕಲ್ಪಿಸುವುದು ಈ ಸಸ್ಯ ಶಾಸ್ತ್ರೀಯ ತೋಟದ ಮೂಲ ಉದ್ದೇಶವಾಗಿದೆ.
ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್. ಸಿ ಮಹದೇವಪ್ಪ, ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್. ಎಸ್ ಮಲ್ಲಿಕಾರ್ಜುನ್, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ ವೆಂಕಟೇಶ್, ಶಾಸಕ ಜಿ .ಟಿ ದೇವೇಗೌಡ, ಮೇಯರ್ ಶಿವಕುಮಾರ್, ಜಿಲ್ಲಾಧಿಕಾರಿ ಡಾ. ಕೆ ವಿ ರಾಜೇಂದ್ರ, ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಜಿಪಂ ಸಿಇಓ ಕೆ.ಎಂ ಗಾಯತ್ರಿ ಸೇರಿದಂತೆ ಇತರರು ಭಾಗವಹಿಸಿದ್ದರು.