ಸುದ್ದಿಮೂಲ ವಾರ್ತೆ
ಹೊಸಕೋಟೆ,ನ.24: ಹಳ್ಳಿಗಳಲ್ಲಿ ದಿನನಿತ್ಯ ರೈತರ ಬಳಿಯಿಂದ ಹಾಲಿನ ಡೈರಿಯಲ್ಲಿ ಹಾಲು ತುಂಬಿಕೊಂಡು ಹೋಗುವ ಹಾಲಿನ ಕ್ಯಾಂಟರನ್ನು ಕಳವು ಮಾಡಿದ್ದ ಓರ್ವ ಆರೋಪಿಯನ್ನು ಹೊಸಕೋಟೆ ಪೊಲೀಸರು ಗುಲ್ಬರ್ಗದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹೊಸಕೋಟೆ ತಾಲೂಕಿನ ಕಸಬಾ ಹೋಬಳಿಯ ದೊಡ್ಡಹುಲ್ಲೂರು ಗ್ರಾಮದಲ್ಲಿ ಇತ್ತೀಚೆಗೆ ಮನೆಯ ಮುಂದೆ ನಿಲ್ಲಿಸಿದಂತಹ ಹಾಲಿನ ಕ್ಯಾಂಟರನ್ನು ಕ್ಯಾನ್ಗಳ ಸಮೇತ ಕಳವು ಮಾಡಲಾಗಿತ್ತು. ಕಳವು ಮಾಡಿದ ಆರೋಪಿ ಗುಲ್ಬರ್ಗ ಜಿಲ್ಲೆಯ ಶಹಪುರ ಮೂಲದ ಪ್ರಶಾಂತ್.
ಕೆಟ್ಟ ಚಟಗಳಿಗೆ ಹಣ ಸಂಪಾದನೆ ಮಾಡಲು ತನಗೆ ತಿಳಿದಿದ್ದ ಡ್ರೈವರ್ ವೃತ್ತಿಯನ್ನು ಬಳಕೆ ಮಾಡಿಕೊಂಡಿದ್ದ. ದೊಡ್ಡ ಹುಲ್ಲೂರು ಗ್ರಾಮದಲ್ಲಿ ತನಗೆ ಪರಿಚಯ ಇದ್ದವರ ಬಳಿ ಡ್ರೈವಿಂಗ್ ಕೆಲಸ ಮಾಡುವುದಾಗಿ ನಂಬಿಸಿ 75 ಹಾಲಿನ ಕ್ಯಾನ್ ಸಮೇತ ಕ್ಯಾಂಟರ್ ವಾಹನವನ್ನು ಕಳವು ಮಾಡಿದ್ದ.
ಆಂಧ್ರದ ಮೂಲಕ ಗುಲ್ಬರ್ಗ ತಲುಪಿದ : ಕ್ಯಾಂಟರ್ ಹಾಗೂ ಕ್ಯಾನ್ ಗಳನ್ನ ಕಳವು ಮಾಡಿದ್ದಂತಹ ಆರೋಪಿ ಪ್ರಶಾಂತ್ ಪೊಲೀಸರಿಗೆ ಯಾವುದೇ ರೀತಿಯ ಸುಳಿವು ಸಿಗದಂತೆ ಚಾಣಾಕ್ಷತನದಿಂದ ಹೆದ್ದಾರಿಯ ಟೋಲ್ಗಳ ಮೂಲಕ ಸಾಗದೆ, ದೇವನಹಳ್ಳಿ, ದೊಡ್ಡಬಳ್ಳಾಪುರ, ಗೌರಿಬಿದನೂರು, ಹಿಂದೂಪುರ, ಪಾವಗಡ, ಮಡಕಶಿರ, ಬಳ್ಳಾರಿ, ರಾಯಚೂರು, ಯಾದಗಿರಿಯ ಹಳ್ಳಿಯ ರಸ್ತೆಗಳಲ್ಲಿ ಕ್ಯಾಂಟರ್ ಚಲಾಯಿಸಿಕೊಂಡು ಗುಲ್ಬರ್ಗ ತಲುಪಿದ್ದ.
ಸವಾಲಿನ ಕೆಲಸ : ಕ್ಯಾಂಟರ್ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಿನ ಕೆಲಸವಾಗಿತ್ತು. ಈ ಹಿನ್ನೆಲೆಯಲ್ಲಿ ವಿಶೇಷ ತಂಡವನ್ನು ಸಹ ರಚನೆ ಮಾಡಲಾಗಿತ್ತು. ಕ್ಯಾಂಟರ್ ಕಳವಾದ ಸ್ಥಳದಿಂದ ಸುಮಾರು 120 ಕಿಲೋಮೀಟರ್ ವರೆಗೆ ರಸ್ತೆಯಲ್ಲಿ ಲಭ್ಯವಿರುವ ಹೋಟೆಲ್, ಡಾಬಾ, ಮೆಕಾನಿಕ್ ಶಾಪ್ಗಳು ಸೇರಿದಂತೆ ವಿವಿಧ ಬಗೆಯ ಸುಮಾರು 60ಕ್ಕೂ ಹೆಚ್ಚಿನ ಸಿಸಿಟಿವಿ ದೃಶ್ಯ ಪರಿಶೀಲನೆ ಮಾಡಿದ್ರು. ಸಿಸಿಟಿವಿ ದೃಶ್ಯ, ಆರೋಪಿ ಚಹರೆ ವಾಹನದ ವಿವರದ ಮೇಲೆ ಆರೋಪಿಯನ್ನ ಕ್ಯಾಂಟರ್ ಸಮೇತ ಗುಲ್ಬರ್ಗದ ಶಹಪುರದ ಮೆಕಾನಿಕ್ ಶಾಪ್ ಬಳಿ ಬಂಧಿಸಲಾಯಿತು.
ಆರೋಪಿಯನ್ನ ದಸ್ತಗಿರಿ ಮಾಡಿ 10 ಲಕ್ಷ ಮೌಲ್ಯದ ಕ್ಯಾಂಟರ್ ವಾಹನ ಹಾಗೂ ಹಾಲಿನ ಕ್ಯಾನ್ಗಳ ನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ತೊಡಗಿದ ಡಿವೈಎಸ್ಪಿ ಶಂಕರ್ಗೌಡ ಪಾಟೀಲ್, ಪೊಲೀಸ್ ಇನ್ಸ್ ಪೆಕ್ಟರ್ ಅಶೋಕ್, ಪಿಎಸ್ಸೈ ಸಂಪತ್ ಕುಮಾರ್, ಅಪರಾಧ ವಿಭಾಗದ ಸಿಬ್ಬಂದಿಗಳಾದ ದತ್ತಾತ್ರೇಯ , ಪ್ರಕಾಶ್ ಬಾಬು, ರಮೇಶ್, ನಾಗರಾಜ್, ವಿಠಲ್, ಜೋಯಲ್ ಜರಾಲ್ಡ್, ಗೋಪಾಲ್, ಮತ್ತಿವಣ್ಣನ್, ರಮೇಶ್, ವೀರಭದ್ರಪ್ಪ, ಮೌನೇಶ್, ಮಹಿಳಾ ಸಿಬ್ಬಂದಿ ರಮ್ಯಾ, ಮುಬಾರಕ್ ಅವರನ್ನ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ, ಎಎಸ್ಪಿ ಪುರುಷೋತ್ತಮ್ ಶ್ಲಾಘಿಸಿದ್ದಾರೆ.