ಸುದ್ದಿಮೂಲ ವಾರ್ತೆ
ತುಮಕೂರು, ಏ.29: ಕೊರಟಗೆರೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಜಿ. ಪರಮೇಶ್ವರ್ ಪ್ರಚಾರ ನಡೆಸುತ್ತಿದ್ದ ವೇಳೆ ಅವರ ಮೇಲೆ ಕಲ್ಲು ತೂರಾಟ ನಡೆಸಲಾಗಿದ್ದು, ತಲೆಗೆ ಪೆಟ್ಟು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲೂಕಿನ ಭೈರೇನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಈ ಘಟನೆ ನಡೆದಿದೆ. ಪ್ರಚಾರದ ವೇಳೆಯಲ್ಲಿ ಡಾ. ಜಿ. ಪರಮೇಶ್ವರ್ ಅವರನ್ನು ಎತ್ತಿಕೊಂಡು ಕಾರ್ಯಕರ್ತರು ಕುಣಿಯುತ್ತಿದ್ದಾಗ ಗುಂಪಿನಲ್ಲಿದ್ದ ದುಷ್ಕರ್ಮಿ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾಗಿದೆ. ಕೂಡಲೇ ಅವರನ್ನು ಅಕ್ಕಿರಾಂಪುರದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ತುಮಕೂರಿನ ಸಿದ್ದಾರ್ಥ ವೈದ್ಯಕೀಯ ಕಾಲೇಜಿಗೆ ಸ್ಥಳಾಂತರಿಸಲಾಗಿದೆ.
ಡಾ. ಪರಮೇಶ್ವರ್ ಅವರು ಇತ್ತೀಚೆಗೆ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿಯೂ ಕಲ್ಲು ತೂರಾಟ ಮಾಡಲಾಗಿತ್ತು. ಕಲ್ಲು ಎಸೆತ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಕೊರಟಗೆರೆ ಪೊಲೀಸರು ಬಂಧಿಸಿದ್ದರು. ಕೊರಟಗೆರೆ ತಾಲೂಕಿನ ರೆಡ್ಡಿಹಳ್ಳಿ ವೆಂಕಟಾಪುರ ಗ್ರಾಮದ ರಂಗಧಾಮಯ್ಯ ಬಂಧಿತ ಆರೋಪಿಯಾಗಿದ್ದು, ಸದ್ಯ ಆರೋಪಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಘಟನೆಯಲ್ಲಿ ಮಹಿಳಾ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದರು.
ಈಗ ಮತ್ತೆ ಪರಮೇಶ್ವರ್ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಚುನಾವಣೆ ಸಂದರ್ಭದಲ್ಲಿ ಅವರ ಮೇಲೆ ಆಗಿರುವ ಎರಡನೇ ದಾಳಿ ಇದಾಗಿದೆ.