ಸುದ್ದಿಮೂಲ ವಾರ್ತೆ
ಬೆಂಗಳೂರು, ಆ.23: ರಾಜ್ಯದಲ್ಲಿ ಮಳೆ ಅಭಾವ ಎದುರಾಗಿ ಬರಗಾಲ ಎದುರಾಗಿದೆ. ಈ ಸಂದರ್ಭದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ತಮಿಳುನಾಡಿಗೆ ಹರಿಸುತ್ತಿರುವ ಕಾವೇರಿ ನೀರನ್ನು ಈ ತಕ್ಷಣವೇ ನಿಲ್ಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಡಾ.ಮುಖ್ಯಮಂತ್ರಿ ಚಂದ್ರು ಆಗ್ರಹಿಸಿದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ಜೊತೆಗೂಡಿ ನಗರದ ಗನ್ ಹೌಸ್ ಸರ್ಕಲ್ನಲ್ಲಿ ಬುಧವಾರ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದರು. ಇದೇ ಸಮಯದಲ್ಲಿ ಕಾವೇರಿ ನೀರಾವರಿ ನಿಗಮದ ಮುಖ್ಯ ಅಭಿಯಂತರರ ಕಚೇರಿಗೆ ಮುತ್ತಿಗೆ ಹಾಕಿದರು.
ರಾಜ್ಯ ಕಾಂಗ್ರೆಸ್ ಸರ್ಕಾರ ಸರ್ವಪಕ್ಷಗಳ ಸಭೆಗೆ ರಾಷ್ಟ್ರೀಯ ಪಕ್ಷವಾದ ಆಮ್ ಆದ್ಮಿ ಪಕ್ಷವನ್ನು ಕರೆಯದೆ ದುರಹಂಕಾರವನ್ನು ಮೆರೆದಿದ್ದಾರೆ. ಕಾವೇರಿ ನೀರಿನ ಸಮಸ್ಯೆಗೆ ಸಾಕಷ್ಟು ಹೋರಾಟ ಮಾಡಿರುವ ವಕೀಲರ ತಂಡ ನಮ್ಮ ಪಕ್ಷದಲ್ಲಿ ಇದ್ದರೂ ಸಹ ರಾಜ್ಯ ಸರ್ಕಾರ ಉದ್ದಟತನವನ್ನು ತೋರಿಸುತ್ತಿದೆ. ರಾಜ್ಯದಲ್ಲಿ ಬರಗಾಲ ಪರಿಸ್ಥಿತಿ ಇದ್ದರೂ ಸಹ ಮುಂಜಾಗ್ರತೆಯಿಂದ ಮೊದಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಸಂಕಷ್ಟ ಕಾಲದಲ್ಲಿ ನೀರನ್ನು ಬಿಡಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಮನವರಿಕೆ ಮಾಡಲು ರಾಜ್ಯ ಸರ್ಕಾರ ವೈಫಲ್ಯಗೊಂಡಿದೆ. ರಾಜ್ಯದ ರೈತರ ನೆಲ, ಜಲ ವಿಚಾರದಲ್ಲಿ ಸರ್ಕಾರವು ತಾತ್ಸಾರ ಧೋರಣೆಯನ್ನು ಸಹಿಸಲು ಸಾಧ್ಯವಿಲ್ಲ ಎಂದುಮುಖ್ಯಮಂತ್ರಿ ಚಂದ್ರು ಸರ್ಕಾರದ ನಡೆಯನ್ನು ಖಂಡಿಸಿದರು.
ಈ ವೇಳೆ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಂಚಿತ್ ಸೆಹವಾನಿ, ರಾಜ್ಯ ಉಪಾಧ್ಯಕ್ಷ ಮೋಹನ್ ದಾಸರಿ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಕುಶಲ ಸ್ವಾಮಿ,ಯುವ ಘಟಕದ ಉಪಾಧ್ಯಕ್ಷ ಗಿರೀಶ್ ನಾಯ್ಡು ಸೇರಿದಂತೆ ಮಾಳವಿಕ, ಧರ್ಮಶ್ರೀ, ಸೋಸಲೆ ಸಿದ್ದರಾಜು, ವಿಶ್ವನಾಥ್, ಜ್ಯೋತಿಶ್ ಕುಮಾರ್ , ವೆಂಕಟೇಶ್ ಹಾಗೂ ಅನೇಕ ಮುಖಂಡರುಗಳು ಕಾರ್ಯಕರ್ತರುಗಳು ಭಾಗವಹಿಸಿದ್ದರು.