ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಜು 31 : ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವುದನ್ನು ವಿರೋಧಿಸಿ ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಕಾರ್ಯಕರ್ತರು ಹಾಗೂ ಭಾರತೀಯರ ಸೇವಾ ಸಮಿತಿ ಕಾರ್ಯಕರ್ತರು ಕೆ.ಆರ್.ಪುರದ ಸಂತೆ ಮೈದಾನದಲ್ಲಿ ಪ್ರತಿಭಟನೆ ನಡೆಸಿದರು.
ಕೆ.ಆರ್.ಪುರದ ಸಂತೆ ಮೈದಾನದಿಂದ ನೂರಾರು ಬೀದಿ ಬದಿ ವ್ಯಾಪಾರಿಗಳು ಕೆಪಿಸಿಸಿ ಕಚೇರಿ ವರೆಗೂ ಜಾಥಾ ನಡೆಸಿ ಬಳಿಕ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ, ಭಾರತೀಯ ಸೇವಾ ಸಮಿತಿ ರಾಜ್ಯಾಧ್ಯಕ್ಷ ಹೂಡಿ ರಾಮಚಂದ್ರಪ್ಪ, ರಾಜ್ಯ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರು ಬ್ರಾಂಡ್ ಬೆಂಗಳೂರು ಎಂಬ ಹೆಸರಿನಲ್ಲಿ ಬಿಬಿಎಂಪಿ ವ್ಯಾಪ್ತಿಯ ಬಡ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸಿ ಬಡವರ ಹೊಟ್ಟೆ ಮೇಲೆ ಹೊಡೆಯುವಂತ ಕೆಲಸ ಮಾಡಲು ಹೊರಟಿರುವುದು ಖಂಡನೆಯವಾಗಿದ್ದು, ಬೆಂಗಳೂರಿನ ಬ್ರಾಂಡ್ ಸಿಟಿ ಮಾಡುವರದಲ್ಲಿ ತಪ್ಪಿಲ್ಲ. ಅದಕ್ಕೆ ನಮ್ಮ ವಿರೋಧ ಇಲ್ಲ ಆದರೆ ಗುಬ್ಬಿಯ ಮೇಲೆ ಭ್ರಹ್ಮಾಸ್ತ್ರ ಪ್ರಯೋಗಮಾಡುತ್ತಿರುವುದು ಸರಿಯಲ್ಲ ಎಂದರು.
ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸುವವರು ಲಕ್ಷಾಂತರ ಮಂದಿ ಇದ್ದಾರೆ. ಇವರ ಹೊಟ್ಟೆ ಮೇಲೆ ಹೊಡೆಯುವ ಕೆಲಸ ಇದಾಗಿದ್ದು, ಹಿಂದಿನ ಸರ್ಕಾರಗಳು ಈ ರೀತಿಯ ನಿರ್ಣಯಗಳನ್ನು ತೆಗೆದುಕೊಂಡಿರಲಿಲ್ಲ, ಬ್ರಾಂಡ್ ಸಿಟಿ ಹೆಸರಿನಲ್ಲಿ ಬಡವರನ್ನ ಬೀದಿಗೆ ತಳ್ಳುವುದು ಸರಿಯಲ್ಲ. ಕೂಡಲೇ ಪ್ರಸ್ತಾಪವನ್ನು ಹಿಂಪಡೆಯಬೇಕು. ಇಲ್ಲವಾದಲ್ಲಿ ಆಗಸ್ಟ್ 14ರಂದು ಭಾರತೀಯರ ಸೇವಾ ಸಮಿತಿ ಹಾಗೂ ಸರ್ವ ಸಂಘಟನೆಗಳ ಒಕ್ಕೂಟ ಬೆಂಗಳೂರಿನಲ್ಲಿ ಉಗ್ರವಾದ ಹೋರಾಟವನ್ನು ಮಾಡಲಾಗುತ್ತದೆ ಎಂದರು.
ಅಖಿಲ ಕರ್ನಾಟಕ ರೈತರ ಮತ್ತು ವ್ಯಾಪಾರಿಗಳ ಒಕ್ಕೂಟದ ಅಧ್ಯಕ್ಷ ಎಲೆ.ಶ್ರೀನಿವಾಸ್ ಮಾತನಾಡಿ, ರಾಜ್ಯ ಸರ್ಕಾರ ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ಬಡ ಬೀದಿ ಬದಿ ವ್ಯಾಪಾರಿಗಳನ್ನು ಬೀದಿಗೆ ತಳ್ಳುವ ಯತ್ನಕ್ಕೆ ಮುಂದಾಗಿದೆ. ಬೆಂಗಳೂರು ನಗರದಲ್ಲಿ ಸುಮಾರು ಲಕ್ಷಾಂತರ ಕುಟುಂಬಗಳು ಬೀದಿ ಬದಿ ವ್ಯಾಪಾರ ನಂಬಿಕೊಂಡು ಜೀವನ ನಡೆಸುತ್ತಿದ್ದು,ಇದೀಗ ಸರ್ಕಾರ ಬೀದಿ ಬದಿ ವ್ಯಾಪಾರಿಗಳ ಜೀವಿಸುವ ಹಕ್ಕನ್ನು ಕಸಿದುಕೊಳ್ಳುತ್ತಿದೆ ಎಂದು ಆರೋಪಿಸಿದರು.
ಬಂಡವಾಳ ಶಾಹಿ ಹಾಗೂ ಬಹುರಾಷ್ಟ್ರೀಯ ಕಂಪನಿಗಳ ಜೊತೆ ಕೈಜೋಡಿಸಿರುವ ಬಿಬಿಎಂಪಿ ಅಧಿಕಾರಿಗಳು ರಾತ್ರೋರಾತ್ರಿ ಅಂಗಡಿ ಮುಂಗಟ್ಟುಗಳನ್ನು ಕ್ರೈನ್ ಮೂಲಕ ತೆರವುಗೊಳಿಸಿ ಬ್ರಾಂಡ್ ಬೆಂಗಳೂರು ಹೆಸರಿನಲ್ಲಿ ತೊಂದರೆ ಕೊಡುತ್ತಿದ್ದಾರೆ. ನಗರದಲ್ಲಿರುವ ಬಡ ಬೀದಿ ಬದಿ ವ್ಯಾಪಾರಿಗಳನ್ನು ಒಕ್ಕಲೆಬ್ಬಿಸುವ ಪ್ರಸ್ತಾವವನ್ನು ಸರ್ಕಾರ ಕೂಡಲೇ ಕೈಬಿಟ್ಟು, ಪ್ರತ್ಯೇಕ ನಿಗಮ ಮಂಡಳಿ ಸ್ಥಾಪಿಸಿ ಬೀದಿ ವ್ಯಾಪಾರಿಗಳ ಹಿತಕಾಯುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ನೂರಾರು ಬೀದಿ ಬದಿ ವ್ಯಾಪಾರಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.