ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಜು.25: ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಬಶೆಟ್ಟಹಳ್ಳಿ ಕರ್ನಾಟಕ ಪಬ್ಲಿಕ್ ಶಾಲೆಯ ಪ್ರಾಂಶುಪಾಲರ ಧೋರಣೆಯನ್ನು ವಿರೋಧಿಸಿ ಮತ್ತು ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ವಿದ್ಯಾರ್ಥಿಗಳು ಕಾಲೇಜಿಗೆ ಬೀಗ ಜಡಿದು ಪ್ರತಿಭಟನೆಯ ಹಾದಿ ಹಿಡಿದಿದ್ದಾರೆ.
ಕಾಲೇಜಿನ ಪ್ರಾಂಶುಪಾಲ ನಂಜಪ್ಪ ಎಂಬವರು ಸಮರ್ಪಕವಾಗಿ ಕಾಲೇಜಿಗೆ ಬರುತ್ತಿಲ್ಲ ಅವರಿಗೆ ಇಷ್ಟ ಬಂದಂತೆ ಬಂದು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿ ಹೋಗುತ್ತಾರೆ ನಮಗೆ ಫಿಸಿಕ್ಸ್ ಪಾಠ ಮಾಡಬೇಕು ಆದರೆ ಅವರು ಕಚೇರಿ ಕೆಲಸ ಇದೆ ಎಂದು ಕಾಲೇಜಿಗೆ ಕಾಟ ಆಚಾರಕ್ಕೆ ಬಂದು ಹೋಗುವ ಕಾಯಕವನ್ನು ರೂಢಿಸಿಕೊಂಡಿದ್ದಾರೆ ಇದರಿಂದಾಗಿ ನಮ್ಮ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದೆ ಎಂದು ವಿದ್ಯಾರ್ಥಿಗಳು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಕಾಲೇಜಿನ ಪ್ರಾಂಶುಪಾಲರು ಸರ್ಕಾರದ ನೀತಿ ನಿಯಮಗಳನ್ನು ಗಾಳಿಗೆ ತೂರಿದ್ದಾರೆ ಇವರನ್ನು ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ ಪ್ರಾಂಶುಪಾಲರ ಧೋರಣೆ ವಿರುದ್ಧ ಈಗಾಗಲೇ ಹಲವು ಬಾರಿ ಹೋರಾಟ ಮಾಡಿದರು ಸಹ ಹಿರಿಯ ಅಧಿಕಾರಿಗಳು ಬಂದು ಸಮಸ್ಯೆಯನ್ನು ಬಗೆಹರಿಸುವ ಭರವಸೆ ನೀಡುತ್ತಾರೆ ಹೊರತು ಸಮಸ್ಯೆ ಮಾತ್ರ ಹಾಗೆ ಉಳಿದುಕೊಂಡಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರಲ್ಲದೆ ಕಾಲೇಜಿನ ಪ್ರಗತಿಗೆ ಮಾರಕವಾಗಿರುವ ಪ್ರಾಂಶುಪಾಲರನ್ನು ಕೂಡಲೇ ವರ್ಗಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಕಾಲೇಜಿನಲ್ಲಿ ಪಾಠಪ್ರವಚನಗಳನ್ನು ಕುಂಠಿತಗೊಂಡಿರುವ ಕುರಿತು ಪ್ರಾಂಶುಪಾಲರನ್ನು ಪ್ರಶ್ನಿಸಿದರೆ ವಿದ್ಯಾರ್ಥಿಗಳು ತಾವು ದೊಡ್ಡವರಾಗಿದ್ದೀರಿ ದೇವರ ಧ್ಯಾನ ಮಾಡಿ ಓಂ ಜಪ ಮಾಡಿ ಜ್ಞಾನಾರ್ಜನೆ ಬರುತ್ತದೆ ಎಂದು ಹೇಳುವ ಮೂಲಕ ತಮ್ಮ ಜವಾಬ್ದಾರಿಯಿಂದ ನುಣಚಿಕೊಳ್ಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಮನೆಯಲ್ಲಿ ಧ್ಯಾನಮಾಡಿ ಮಾಡಿಕೊಂಡಿದ್ದರೆ ಕಾಲೇಜಿಗೆ ಏನಕ್ಕೆ ಬರಬೇಕು ಎಂದು ವಿದ್ಯಾರ್ಥಿಗಳು ಪ್ರಶ್ನಿಸಿದ್ದಾರೆ ಅಧಿಕಾರಿಗಳು ಪ್ರಾಂಶುಪಾಲರನ್ನು ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳಬೇಕು ಇಲ್ಲದಿದ್ದ ಪಕ್ಷದಲ್ಲಿ ಹೋರಾಟವನ್ನು ಮುಂದುವರೆಸುತ್ತೇವೆ ಎಂದು ಎಚ್ಚರಿಸಿದ್ದಾರೆ.
ಗ್ರಾಮಸ್ಥರ ಸಾಥ್: ಕಾಲೇಜಿನ ಪ್ರಾಂಶುಪಾಲರ ಧೋರಣೆಯನ್ನು ವಿರೋಧಿಸಿ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟಕ್ಕೆ ಗ್ರಾಮಸ್ಥರು ಮತ್ತು ಸ್ಥಳೀಯ ಚುನಾಯಿತ ಪ್ರತಿನಿಧಿಗಳು ಸಾಥ್ ನೀಡಿದ್ದಾರೆ ಪ್ರಾಂಶುಪಾಲರ ನಿರ್ಲಕ್ಷ ಧೋರಣೆಯಿಂದ ಕಾಲೇಜಿನ ಶೈಕ್ಷಣಿಕ ಪ್ರಗತಿ ಕುಂಠಿತವಾಗಿದ್ದು ವಿದ್ಯಾರ್ಥಿಗಳ ಸಂಖ್ಯೆಯು ದಿನದಿನ ಕುಸಿಯುತ್ತಿದೆ ಕೂಡಲೇ ಇಲಾಖೆ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬಂದು ಸಮಸ್ಯೆಯನ್ನು ಬಗೆಹರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ದಿಬ್ಬೂರಹಳ್ಳಿ ಪೊಲೀಸ್ ಠಾಣೆಯ ಪಿಎಸ್ಐ ಪಿ.ವಿ.ಕೃಷ್ಣಪ್ಪ ಹಾಗೂ ಹೆಚ್.ಕೆ.ರಾಜೇಶ್ವರಿ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು.