ಸುದ್ದಿಮೂಲ ವಾರ್ತೆ
ಹೊಸಕೋಟೆ, ಅ. 31 : ಪುಸ್ತಕ ಜ್ಞಾನದ ಜೊತೆಗೆ ಕ್ರೀಡೆಯಲ್ಲಿ ತಮ್ಮ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಇದರಿಂದ ಆರೋಗ್ಯಕರ ದೇಹದಲ್ಲಿ ಮಿದುಳು ಉತ್ತಮವಾಗಿ ಅಭಿವೃದ್ಧಿಗೊಳ್ಳುತ್ತದೆ. ಆಟೋಟ ಸ್ಪರ್ಧೆಗಳಲ್ಲಿ ಮಕ್ಕಳು ತಮ್ಮ ಪ್ರತಿಭೆ ಪ್ರದರ್ಶಿಸಲು ಉತ್ತಮ ವೇದಿಕೆಯಾಗಿದೆ ಎಂದು ಬಿಇಪದ್ಮನಾಭ ಹೇಳಿದರು.
ಹೊಸಕೋಟೆ ತಾಲೂಕಿನ ನಂದಗುಡಿಯ ಕೆಪಿಎಸ್ ಶಾಲಾ ಮೈದಾನದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಮಂಗಳವಾರ ನಡೆದ ಜಿಲ್ಲಾ ಮಟ್ಟದ ಪ್ರಾಥಮಿಕ, ಪ್ರೌಢಶಾಲೆಯ ಬಾಲಕ, ಬಾಲಕಿಯರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಕ್ರೀಡೆಗಿಂತ ಮೊಬೈಲ್ ವೀಕ್ಷಣೆಯಲ್ಲೆ ಹೆಚ್ಚು ಸಮಯ ಕಳೆಯುವುದು ಹವ್ಯಾಸ ಮಾಡಿಕೊಂಡಿದ್ದಾರೆ. ಇದು ಮಾನಸಿಕ ಖಿನ್ನತೆಗೆ ಕಾರಣವಾಗುತ್ತದೆ.
ವಿದ್ಯಾರ್ಥಿಗಳು ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಸರಕಾರ ಕ್ರೀಡಾ ಕೂಟಗಳನ್ನು ಅಯೋಜಿಸುತ್ತಿದೆ. ಆಟಗಾರರು ಕ್ರೀಡೆಯಲ್ಲಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಕ್ರೀಡಾಸೂರ್ತಿ ಮೆರೆಯಬೇಕು ಎಂದರು.
ಸಮಾಜ ಸೇವಕ ಕಲ್ಕೆರೆ ಕೆ.ಎಸ್. ಮಹದೇವಯ್ಯ ಮಾತನಾಡಿ, ವಿಶ್ವವಿಖ್ಯಾತ ಆಟಗಾರರನ್ನು ಆದರ್ಶವನ್ನಾಗಿಟ್ಟುಕೊಂಡು ಶೈಕ್ಷಣಿಕ ಪ್ರಗತಿಯ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸಲು ವಿದ್ಯಾರ್ಥಿಗಳು ಆಸಕ್ತಿ ತೋರಬೇಕು. ಕ್ರಿಕೆಟ್ ಆಟದ ವ್ಯಾಮೋಹದಿಂದ ಕಬ್ಬಡಿ, ಖೋಖೋ ಇನ್ನಿತರೆ ಗ್ರಾಮೀಣ ಕ್ರೀಡೆಗಳು ತೆರೆಮರೆಗೆ ಸರಿಯುತ್ತಿವೆ. ಕ್ರೀಡೆಗೆ ಪ್ರೋತ್ಸಾಹ ನೀಡಿದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮಾಜ ಸೇವಕರಾದ ಕೆ.ಎಸ್. ಮಹದೇವಯ್ಯ ಹಾಗೂ ಎಂ. ಮಂದೀಪ್ಗೌಡ ಸರಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಹಾಗೂ ಶಾಲಾ ಬ್ಯಾಗ್ಕೊಡುಗೆಯಾಗಿ ನೀಡಿದರು.
ಕಾರ್ಯಕ್ರಮದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಜಶೇಖರಗೌಡ,ಸಮಾಜ ಸೇವಕ ಕಲ್ಕೆರೆ ಕೆ.ಎಸ್. ಮಹದೇವಯ್ಯ, ಗ್ರಾ.ಪಂನ ಅಧ್ಯಕ್ಷೆ ಮುನಿವೆಂಕಟಮ್ಮ ಬಚ್ಚಪ್ಪ, ಸದಸ್ಯರಾದ ವೀರರಾಜ್, ಎನ್.ಎನ್. ಮಂಜುನಾಥ್, ಮಂಜುಳ ನಾಗೇಶ್, ಎಸ್.ಡಿಎಂ.ಸಿ ಅಧ್ಯಕ್ಷ ಗಂಗಾಧರ್, ಸದಸ್ಯ ಜಿ.ಮೂರ್ತಿ, ಪ್ರಾಂಶುಪಾಲ
ಸಿದ್ದರಾಯಯ್ಯ, ಉಪ ಪ್ರಾಂಶುಪಾಲೆ ಶುಭ, ಶಿಕ್ಷಕರ ಸಂಘದ ಜಿಲ್ಲಾ ಸಹ ಕಾರ್ಯದರ್ಶಿ ಮುನಿಶಾಮಯ್ಯ, ಟಿಪಿಇಐನ ಜಗದೀಶ್, ಪಿಡಿಒ ಪುಷ್ಪಲತಾ, ಕಾರ್ಯದರ್ಶಿ ವೆಂಕಟೇಶ್,ತರಬೇತುದಾರ ಲಕ್ಷ್ಮಣ್, ದಾನಿ ಲಕ್ಷ್ಮಣ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್, ಉಪಾಧ್ಯಕ್ಷ ಪ್ರಕಾಶ್, ತಾಲೂಕು ಅಧ್ಯಕ್ಷ ಡಿ. ಕೃಷ್ಣಪ್ಪ, ನಿರ್ದೇಶಕ ಗೋವಿಂದರಾಜು, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.