ಸುದ್ದಿಮೂಲ ವಾರ್ತೆ
ಮೈಸೂರು, ಜು.15 : ದಿನೇ ದಿನೇ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ದ್ವಿಗುಣವಾಗುತ್ತಿದೆ. ಇದರಿಂದ ಶಾಲೆ, ಕಾಲೇಜುಗಳಿಗೆ ಸರಿ ಸಮಯಕ್ಕೆ ವಿದ್ಯಾರ್ಥಿಗಳು ಹೋಗಲು ಆಗುತ್ತಿಲ್ಲ, ನಗರ ಪ್ರದೇಶಕ್ಕಿಂತಲೂ ಸಮಸ್ಯೆ ಗ್ರಾಮೀಣ ಭಾಗದಲ್ಲಿ ಗಂಭೀರವಾಗಿದೆ ಬಸ್ ಪೂರ್ಣ ಪ್ರಮಾಣದಲ್ಲಿ ತುಂಬಿರುವ ಕಾರಣ ಎಲ್ಲಾ ಕಡೆ ಬಸ್ ಗಳು ನಿಲುಗಡೆ ಮಾಡಲು ಆಗುತ್ತಿಲ್ಲ.ವಿದ್ಯಾರ್ಥಿನಿಯರು ಬಸ್ ಗಾಗಿ ಕಾದು ಬಸವಳಿದರೂ ಸಹ ಬಸ್ ನಿಲ್ಲಿಸದ ಕಾರಣ ಸುಮಾರು 6 ಕಿಮೀ ದೂರ ನಡೆದುಕೊಂಡೆ ಶಾಲಾ-ಕಾಲೇಜಿಗೆ ಹಾಜರಾಗಬೇಕಾಗಿದೆ.
ಮೈಸೂರು ಜಿಲ್ಲೆ ನಂಜನಗೂಡು ತಾಲೂಕಿನ ದೇಬೂರು, ಬ್ಯಾಳಾರು ಗ್ರಾಮದ ಪ್ರೌಢಶಾಲೆ, ಪಿಯುಸಿ, ಹಾಗೂ ಪದವಿ ವಿದ್ಯಾರ್ಥಿಗಳು ಬೆಳಿಗ್ಗೆ 7 ಗಂಟೆ ಯಿಂದ 9 ಗಂಟೆವರೆಗೆ ಕಾದರೂ ಸಹ ಬಂದ ಬಸ್ಗಳುಗಳು ತುಂಬಿತುಳುಕುತ್ತಿರುವುದರಿಂದ ಬಸ್ ನಿಲ್ಲಿಸುತ್ತಿಲ್ಲ. ವಿದ್ಯಾರ್ಥಿಗಳನ್ನು ಕಂಡೊಡನೆ ನಿಲ್ಲಿಸದೆ ಹೋಗುತ್ತಿದ್ದರಿಂದ ಬೇಸತ್ತ ಸುಮಾರು 40ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ನಡೆದುಕೊಂಡೆ ಶಾಲಾ ಕಾಲೇಜುಗಳತ್ತ ಮುಖ ಮಾಡಿದರು.
ಈಗ ಗಂಟೆಗೊಂದು
ಈ ಮೊದಲು ಅರ್ಧ ಗಂಟೆಗೆ ಒಂದರಂತೆ ಬರುತ್ತಿದ್ದ ಬಸ್ಸುಗಳು ಶಕ್ತಿ ಯೋಜನೆಯಿಂದಾಗಿ ಪ್ರತಿ ಒಂದು ಗಂಟೆಗೆ ಬರುತ್ತಿವೆ. ಜೊತೆಗೆ ಬಂದ ಬಸ್ಸುಗಳೆಲ್ಲ ಹುಲ್ಲಹಳ್ಳಿ ಭಾಗದಿಂದಲೇ ರಶ್ ಆಗಿ ಬರುತ್ತವೆ. ಆದಕಾರಣ ಬಸ್ಸಿನ ಚಾಲಕರು ವಿದ್ಯಾರ್ಥಿಗಳು ಎಂದು ಅಸಡ್ಡೆಯಿಂದ ಬಸ್ಸನ್ನು ನಿಲ್ಲಿಸದೆ ಚಲಾಯಿಸಿಕೊಂಡು ಹೋಗುತ್ತಾರೆ. ಇದರಿಂದಾಗಿ ನಮಗೆ ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬಸ್ ರಶ್ ಆದರೂ ಸಹ ನಾವು ಜೀವದ ಹಂಗು ತೊರೆದು ಪ್ರಯಾಣಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಿದ್ಯಾರ್ಥಿನಿ ರಾಜೇಶ್ವರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ..
ವಿದ್ಯಾರ್ಥಿನಿ ಶಾಲಿನಿ ಮಾತನಾಡಿ, ಶಕ್ತಿ ಯೋಜನೆ ಜಾರಿಯಾದ ಬಳಿಕ ವಿದ್ಯಾರ್ಥಿನಿಯರ ಪಾಡು ಹೇಳತೀರದಾಗಿದೆ ಈ ಬಗ್ಗೆ ಅಧಿಕಾರಿಗಳು ಮತ್ತು ಶಾಸಕರು ಕ್ರಮವಹಿಸಿ ನಿಗದಿತ ಸಮಯಕ್ಕೆ ಬಸ್ ಸಂಚರಿಸುವಂತೆ ಕ್ರಮವಹಿಸಬೇಕು. ಬಸ್ ಚಾಲಕರಿಗೆ ವಿದ್ಯಾರ್ಥಿನಿಗಳನ್ನು ಕಂಡೊಡನೆ ಬಸ್ ನಿಲ್ಲಿಸುವಂತೆ ಸೂಚನೆ ನೀಡಬೇಕು ಎಂದು ಆಗ್ರಹಿಸಿದರು.
ಜಾನುವಾರುಗಳನ್ನು ಸಾಗಿಸುವ ವಾಹನದಲ್ಲಿ ವಿದ್ಯಾರ್ಥಿಗಳು ಶಾಲಾ ಕಾಲೇಜಿಗೆ ತೆರಳುವ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸ. ಕೂಡಲೇ ಶಾಸಕರು ಮತ್ತು ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಮನವಿ ಮಾಡಿದ್ದಾರೆ