ಸುದ್ದಿಮೂಲ ವಾರ್ತೆ
ದೇವನಹಳ್ಳಿ, ಸೆ. 5 : ಪಟ್ಟಣದ ಹಳೆ ಬಸ್ ನಿಲ್ದಾಣ ಬಿಬಿ ರಸ್ತೆಯ ಸಂತೆ ಮುಂಭಾಗದಲ್ಲಿರುವ ಇಂದಿರಾ ಕ್ಯಾಂಟಿನ್ನಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ, ಮೂಲಭೂತ ಸೌಕರ್ಯಗಳ ಕೊರತೆ ಸೇರಿದಂತೆ ಶುಚಿತ್ವ ಕಾಪಾಡುವಲ್ಲಿ ಇಂದಿರಾ ಕ್ಯಾಂಟಿನ್ನ ನಿರ್ವಾಹಕರು ಅಸಡ್ಡೆ ತೋರಿದ್ದಾರೆ ಎಂಬ ದೂರಿನ ಅನ್ವಯ ಜಿಲ್ಲಾಧಿಕಾರಿ ಡಾ.ಶಿವ ಶಂಕರ ಮಂಗಳವಾರ ದಿಢೀರ್ ಎಂದು ಇಂದಿರಾ ಕ್ಯಾಂಟಿನ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕ್ಯಾಂಟಿನ್ನಲ್ಲಿ ಮಧ್ಯಾಹ್ನ ಭೋಜನ ಸೇವಿಸಿದ ಜಿಲ್ಲಾಧಿಕಾರಿ, ಅಲ್ಲಿದ್ದ ಸಾರ್ವಜನಿಕರನ್ನು ಊಟದ ಗುಣಮಟ್ಟದ ಬಗ್ಗೆ ವಿಚಾರಣೆ ಮಾಡಿದರು. ಮೆನುವಿನಲ್ಲಿ ಯಾವ ಆಹಾರ ಇದ್ದರೇ ಹೆಚ್ಚಾಗಿ ಜನರು ಇಷ್ಟ ಪಡುತ್ತಾರೆ ಎಂಬ ವಿಚಾರವಾಗಿ ಚರ್ಚೆ ನಡೆಸಿದ ಅವರು, ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು, ಗುಣಮಟ್ಟದ ಪೌಷ್ಠಿಕಾಂಶಯುಕ್ತ ಆಹಾರವನ್ನು ಸಾರ್ವಜನಿಕರಿಗೆ ವಿತರಣೆ ಮಾಡಬೇಕು ಎಂದು ಕ್ಯಾಂಟಿನ್ ನಿರ್ವಹಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಬಳಿಕ ಮಾತನಾಡಿದ ಜಿಲ್ಲಾಧಿಕಾರಿ ಡಾ.ಶಿವ ಶಂಕರ್, ಸರ್ಕಾರದ ತೀರ್ಮಾನದಂತೆ ರಾಜ್ಯದ ಉತ್ತರ ಭಾಗದಲ್ಲಿ ಚಪ್ಪಾತಿ, ರೊಟ್ಟಿಯ ಖಾದ್ಯಗಳು, ದಕ್ಷಿಣ ಭಾಗದಲ್ಲಿ ರಾಗಿಯ ಮುದ್ದೆಯ ನೂತನ ಮೆನುವನ್ನು ಮುಂದಿನ 2 ತಿಂಗಳಲ್ಲಿ ಜಾರಿ ಮಾಡಲಾಗುತ್ತಿದೆ. ಇದರೊಂದಿಗೆ ಶುಚಿತ್ವ ಕಾಪಾಡುವುದು, ಕುಡಿಯುವ ನೀರು ಒಟ್ಟಾರೆ ವಾತಾವರಣದ ಬಗ್ಗೆ ತಿಳಿದುಕೊಳ್ಳುವ ದೃಷ್ಟಿಯಿಂದ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಮಾಹಿತಿ ನೀಡಿದರು.
ಎಪಿಎಂಸಿ ಮಾರುಕಟ್ಟೆ ಜಾಗದ ಸದ್ಬಳಕೆಗೆ ಆಗ್ರಹ
ಇಂದಿರಾ ಕ್ಯಾಂಟಿಗ್ಗೆ ಹೊಂದಿಕೊಂಡಿರುವ ಎಪಿಎಂಸಿ ಮಾರುಕಟ್ಟೆಯ ಸುಸರ್ಜಿತ ಜಾಗವನ್ನು ಸದ್ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ನಿರ್ದೇಶನ ನೀಡಬೇಕು ಎಂದು ಅಲ್ಲಿದ್ದ ಸಾರ್ವಜನಿಕರು ಒತ್ತಾಯಿಸಿದರು.
ಜಿಲ್ಲಾಧಿಕಾರಿಗಳನ್ನು ಮಾರುಕಟ್ಟೆಯ ಸ್ಥಳಕ್ಕೆ ಕರೆದುಕೊಂಡು ಹೋದ ಅವರು, ಅಲ್ಲಿನ ವಾಸ್ತವ ಸ್ಥಿತಿಗತಿಯ ಕುರಿತು ವಿಚಾರ ವಿನಿಮಯ ಮಾಡಿಕೊಂಡರು. ಕುಡುಕರ ತಾಣವಾಗಿ ಬದಲಾವಣೆಯಾಗಿರುವ ಮಾರುಕಟ್ಟೆ ಸ್ಥಳವನ್ನು ತೆರವು ಗೊಳಿಸಿ, ಅದನ್ನು ಸಾರ್ವಜನಿಕರಿಗೆ, ವ್ಯಾಪಾರಸ್ಥರಿಗೆ ಸೂಕ್ತವಾಗಿ ಉಪಯೋಗಿಸಿಕೊಳ್ಳುವಂತೆ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.
ಕೂಡಲೇ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ಮಾರುಕಟ್ಟೆ ಸ್ಥಳವನ್ನು ಸದ್ಬಳಕೆ ಮಾಡಿಕೊಳ್ಳಲು ಅನುವು ಮಾಡುವುದಾಗಿ ಭರವಸೆ ನೀಡಿದರು.
ಈ ವೇಳೆ ಕಂದಾಯ ಇಲಾಖೆಯ ಆರ್.ಐ.ಮಹೇಶ್, ಪುರಸಭೆ ಇಂಜಿನಿಯರ್ ಗಜೇಂದ್ರ ಆರೋಗ್ಯ ನಿರೀಕ್ಷಕಿ ಶ್ರೀದೇವಿ, ಮಾನವ ಹಕ್ಕುಗಳ ತಾಲ್ಲೂಕು ಅಧ್ಯಕ್ಷ ನಾರಾಯಣ ಸ್ವಾಮಿ ಪುರಸಭಾ ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.