ರಾಘವೇಂದ್ರ ಸ್ವಾಮಿಗಳ ಉತ್ತರಾರಾಧನೆ – ಮಹಾ ರಥೋತ್ಸವ
ಗುರುರಾಯರು ಎಲ್ಲ ಭಕ್ತರ ಸಂಕಷ್ಟ ಪರಿಹರಿಸುವರು: ಸುಬುಧೇಂದ್ರ ತೀರ್ಥರು
ಸುದ್ದಿಮೂಲ ವಾರ್ತೆ
ಮಂತ್ರಾಲಯ, ಸೆ.2: ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಹಿನ್ನೆಲೆ ಮಠದ ರಾಜಬೀದಿಯಲ್ಲಿ ಅದ್ಧೂರಿಯಾಗಿ ಮಹಾ ರಥೋತ್ಸವಕ್ಕೆ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಅದ್ದೂರಿ ಚಾಲನೆ ನೀಡಿದರು.
ಮಹಾ ರಥೋತ್ಸವದ ಹಿನ್ನೆಲೆ ಗುರುರಾಯರ ಉತ್ಸವ ಮೂರ್ತಿಯನ್ನು ಶ್ರೀ ಮಠದ ಆವರಣದಿಂದ ಕಲಾ ತಂಡಗಳ ಮೆರವಣಿಗೆ ಮೂಲಕ ಶ್ರೀ ಗುರುಸಾರಭೌಮ ವಿದ್ಯಾಪೀಠದ ಕರೆದೊಯ್ದು ವಿದ್ಯಾಪೀಠದ ವಿದ್ಯಾರ್ಥಿಗಳಿಂದ ರಾಘವೇಂದ್ರ ಅಷ್ಟೋತ್ತರ ಪಠಣದ ಬಳಿಕ ಶ್ರೀ ಮಠಕ್ಕೆ ಕರೆತಂದು ಮೂಲ ಬೃಂದಾವನ ಪೂಜೆ ಸಲ್ಲಿಸಿ ವಸಂತೋತ್ಸವ ಬಳಿಕ ಮಹಾರಥೋತ್ಸವ ಜರುಗಿಸಲಾಯಿತು.
ರಥೋತ್ಸವ ಹಿನ್ನೆಲೆ ನೆರೆದಿದ್ದ ಸಹಸ್ರಾರು ಭಕ್ತರಿಗೆ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಆಶೀರ್ವಚನ ನೀಡಿ ಮಾತನಾಡಿ, ಇಂದು ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದ ಉತ್ತರಾರಾಧನೆ ಸಮಯದಲ್ಲಿ ಭಕ್ತಾದಿಗಳ ಸೇವೆಗೆ ಮೆಚ್ಚಿ ಗುರುರಾಯರು ಆನಂದದಿಂದ ಮಹಾರಥದಲ್ಲಿ ವಿರಾಜಮಾನರಾಗಿ, ಜಾತ್ಯಾತೀತರಾಗಿ ಎಲ್ಲ ಭಕ್ತರಿಗೆ ಹರಿಸುವರು.
ಇಂದು ದೇಶ ಜಗದ್ಗುರು ಆಗುವ ನಿಟ್ಟಿನಲ್ಲಿ ಮುನ್ನಡೆಯುತ್ತಿದ್ದು, ಚಂದ್ರಯಾನ ಯಶಸ್ವಿ ಬಳಿಕ, ಸರ್ಯಯಾನ ಇಂದು ಆರಂಭಿಸಿದ್ದು ಇದರಲ್ಲಿ ಯಶಸ್ವಿ ದೊರೆಯಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೆವೆ.
ದೇಶ ಭಕ್ತಿ,ಧರ್ಮ ಭಕ್ತಿ, ಮಾನವಿಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಮೂಲಕ ದೇಶವನ್ನು ವಿಶ್ವ ಗುರುವನ್ನಾಗಿಸುವ ನಿಟ್ಟಿನಲ್ಲಿ ಎಲ್ಲರೂ ಕೈ ಜೋಡಿಸಬೇಕು.
ದಿನದಿಂದ ದಿನಕ್ಕೆ ಗುರುರಾಯರ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಭಕ್ತರ ಸಂಖ್ಯೆಗೆ ಅನುಗುಣವಾಗಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಹಾಕಿಕೊಂಡಿದೆ.
ಶ್ರೀ ರಾಘವೇಂದ್ರ ಸ್ವಾಮಿಗಳ 352 ನೇ ಆರಾಧನಾ ಮಹೋತ್ಸವದದಲ್ಲಿ ಶ್ರೀ ಮಠದಿಂದ ಭಕ್ತರ ಅನುಕೂಲಕ್ಕಾಗಿ ನರಹರಿತೀರ್ಥ ವಸತಿ ಗೃಹ, ಶ್ರೀಮೂಲರಾಮ ವಸತಿ ಗೃಹ, ವಿಜಯೀಂದ್ರ ವಸತಿ ಗೃಹ ನವೀಕರಿಸಲಾಗಿದ್ದು, ತುಂಗಾ ಮಾರ್ಗ ಉದ್ಘಾಟನೆ ಮಾಡಲಾಗಿದೆ, ಶ್ರೀಘ್ರದಲ್ಲಿ ಆಧುನಿಕ ಸ್ನಾನ ಘಟ್ಟ ನಿರ್ಮಾಣ ಸೇರಿದಂತೆ ಭಕ್ತರಿಗೆ ಮೂಲಭೂತ ಸೌಕರ್ಯ ನಿಡುವ ನಿಟ್ಟಿನಲ್ಲಿ ಶ್ರೀ ಮಠ ಹಲವಾರು ಯೋಜನೆಗಳು ಹಾಕೊಂಡಿದೆ ಎಂದರು.
ನಂತರ ಹೆಲಿಕ್ಯಾಪ್ಟರ್ ಮೂಲಕ ರಥಕ್ಕೆ ಶ್ರೀಗಳು ಪುಷ್ಪವೃಷ್ಠಿ ಮಾಡಿದರು
ಮಹಾ ರಥೋತ್ಸವದಲ್ಲಿ ಚಂಡಿ ಮೇಳ, ಡೊಲ್ಲು ಕುಣಿತ, ಬ್ಯಾಂಡ್ ವಾದನ , ಭಜನಾ ಮಂಡಳಿಗಳು ಸೇರಿದಂತೆ ಇತರೆ ಕಲಾ ವಾದ್ಯಗಳು, ಕಲಾ ತಂಡಗಳ ನೃತ್ಯ ಪ್ರದರ್ಶನ ನಡುವೆ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಮಹೋತ್ಸವ ಸಪನ್ನಗೊಂಡಿತು.