ಸುದ್ದಿಮೂಲ ವಾರ್ತೆ
ಕೆ.ಆರ್.ಪುರ ಜೂ.3: ವಿದ್ಯಾರ್ಥಿಗಳು ಸಾಧನೆಯೆಂಬ ಗುರಿಯನ್ನು ಬೆನ್ನತ್ತಿದಾಗ ಯಶಸ್ಸು ದೊರೆಯುತ್ತದೆ ಬದುಕು ಸುಂದರವಾಗುತ್ತದೆ ಎಂದು ಗೋಪಾಲನ್ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಾಹಕ ಅಧಿಕಾರಿ ಡಾ.ಸಿ.ಎಂ.ಭಾಸ್ಕರ್ ರೆಡ್ಡಿ ಹೇಳಿದರು.
ವೈಟ್ ಫೀಲ್ಡ್ ಸಮೀಪದ ಹೂಡಿಯ ಗೋಪಾಲನ್ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ವಿಜ್ಞಾನ ಮತ್ತು ವಾಣಿಜ್ಯ ತರಗತಿಗಳನ್ನು ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಸಮಯವನ್ನು ವ್ಯರ್ಥ ಮಾಡದೆ ಓದಿನ ಆಸಕ್ತಿಯನ್ನು ಬೆಳೆಸಿಕೊಂಡು ಸಾಧನೆಯಡೆಗೆ ಸಾಗಬೇಕು. ಪ್ರಥಮ ಪಿಯುಸಿ ಎನ್ನುವುದು ವಿದ್ಯಾರ್ಥಿಗಳ ಬದುಕಿಗೆ ಮಹತ್ವದ ತಿರುವು ಆಗಿದೆ. ಈ ಸುಂದರ ಸಮಯವನ್ನು ಉತ್ತಮವಾದುದಕ್ಕೆ ಉಪಯೋಗಿಸುವ ಮೂಲಕ ಜೀವನ ರೂಪಿಸಿಕೊಳ್ಳಿ ಎಂದರು.
ವಿಜ್ಞಾನ ಮತ್ತು ವಾಣಿಜ್ಯ ವಿಭಾಗದಲ್ಲಿ ವಿಫುಲ ಅವಕಾಶಗಳು ಇರುವುದರಿಂದ ಶೈಕ್ಷಣಿಕ ವರ್ಷದ ಎರಡು ವರ್ಷದಲ್ಲಿ ಉತ್ತಮವಾದ ಅಭ್ಯಾಸ ಮುಖ್ಯವಾಗುತ್ತದೆ. ಓದಿನ ಜೊತೆಗೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡೆಗಳಲ್ಲಿ ಭಾಗವಹಿಸಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗೋಪಾಲನ್ ಸಮೂಹ ಸಂಸ್ಥೆಗಳ ಡೀನ್ ಡಾ.ಆನಂದಪ್ಪ, ಕರ್ನಲ್ ಶೈಲೇಂದ್ರ ರಾವ್, ಪ್ರಾಂಶುಪಾಲ ಮಹೇಶ್ ಇದ್ದರು.
ಕಾರ್ಯಕ್ರಮದಲ್ಲಿ 400 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಪೋಷಕರು ಭಾಗವಹಿಸಿದ್ದರು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೇಳಾಪಟ್ಟಿ ಹಾಗೂ ಶೈಕ್ಷಣಿಕ ಹಾಗೂ ಇತರೆ ಚಟುವಟಿಕೆಗಳ ವಿವರವನ್ನು ನೀಡಲಾಯಿತು.