ಸುದ್ದಿಮೂಲ ವಾರ್ತೆ ,
ಬೆಂಗಳೂರು(ಏ.07): ನಟ ಕಿಚ್ಚ ಸುದೀಪ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನಾಯಕರನ್ನು ಬೆಂಬಲಿಸುತ್ತೇನೆ ಅನ್ನೋ ಘೋಷಣೆ ಹೊರಬಿದ್ದ ಬೆನ್ನಲ್ಲೇ ಪರ ವಿರೋಧಗಳು ಹೆಚ್ಚಾಗಿದೆ. ಸುದೀಪ್ ನಿರ್ಧಾರ ತಪ್ಪು ಎಂದು ಹಲವರು ಸರಣಿ ಟ್ವೀಟ್ ಮಾಡಿದ್ದಾರೆ. ಸುದೀಪ್ ತಮ್ಮನ್ನು ರಾಜಕೀಯ ಪಕ್ಷಕ್ಕೆ ಮಾರಿಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ. ಜೊತೆಗೆ ಬೆದರಿಕೆ ಪತ್ರಗಳು ಬಂದಿದೆ. ಇದೀಗ ಕಿಚ್ಚ ಸುದೀಪ್ ಅವರ ಚಿತ್ರಗಳ ಪ್ರಸಾರ, ಜಾಹೀರಾತುಗಳ ಪ್ರಸಾರಕ್ಕೆ ತಡೆ ಕೋರಬೇಕೆಂದು ಜೆಡಿಎಸ್, ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ. ಸುದೀಪ್ ಅವರ ಯಾವುದೇ ಚಿತ್ರ, ಜಾಹೀರಾತು, ಫೀಚರ್ ಫೀಲ್ಮ್ ಪ್ರಸಾರಕ್ಕೆ ನಿರ್ಬಂಧ ವಿಧಿಸಬೇಕು ಎಂದು ಪತ್ರದಲ್ಲಿ ಮನವಿ ಮಾಡಿದೆ.
ಕನ್ನಡದ ನಟ ಕಿಚ್ಚ ಸುದೀಪ್ ಅವರು ಪ್ರಸ್ತುತ ಬಿಜೆಪಿಯ ಸ್ಟಾರ್ ಪ್ರಚಾರಕರಾಗಿ ಗುರುತಿಸಿಕೊಂಡಿದ್ದಾರೆ. ಆದ್ದರಿಂದ ಅವರ ಸಿನೆಮಾ, ಜಾಹೀರಾತು, ಪೋಸ್ಟರ್ ಮುಂತಾದುವುಗಳು ಬಿತ್ತರಿಸುವ ಮೂಲಕ ಮತದ ಮೇಲೆ ಪ್ರಭಾವ ಬೀರಲಿದೆ.ಈ ಹಿನ್ನೆಲೆಯಲ್ಲಿ ಚುನಾವಣೆ ಮುಗಿಯುವವರೆಗೆ ಸುದೀಪ್ ನಟನೆಯ ಯಾವುದೇ ಶೋ, ಚಲನಚಿತ್ರ ಮತ್ತು ಅವರ ಭಾವಚಿತ್ರವಿರುವ ಜಾಹೀರಾತುಗಳ ಪ್ರಸಾರಕ್ಕೆ ತಡೆ ಹಿಡಿಯಬೇಕು ಎಂದು ಜನತಾದಳ(ಜೆಡಿಎಸ್) ಕಾನೂನು ವಿಭಾಗ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.
ಜೆಡಿಎಸ್ಗೂ ಮೊದಲು ಶಿವಮೊಗ್ಗದ ವಕೀಲ ಕೆಪಿ ಶ್ರೀಪಾಲ ಈಗಾಗಲೇ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಕಿಚ್ಚ ಸುದೀಪ್ ಬೆಜಿಪಿಗೆ ಬೆಂಬಲ ಘೋಷಿಸಿದ ದಿನವೇ ಶ್ರೀಪಾಲ, ಆಯೋಗಕ್ಕೆ ಪತ್ರ ಬರೆದಿದ್ದಾರೆ. ಕಿಚ್ಚ ಸುದೀಪ್ ರವರು ಭಾರತೀಯ ಜನತಾ ಪಕ್ಷದ ಸ್ಟಾರ್ ಪ್ರಚಾರಕರಾಗಿದ್ದಾರೆ. ಹೀಗಾಗಿ ಚುನಾವಣೆ ಮುಗಿಯುವ ವರೆಗೂ ಅವರ ನಟನೆಯ ಯಾವುದೇ ಚಲನ ಚಿತ್ರಗಳು ಚಿತ್ರ ಮಂದಿರಗಳಲ್ಲಿ, ಟಿವಿಗಳಲ್ಲಿ ಪ್ರದರ್ಶನವಾಗಬಾರದು. ಸುದೀಪ್ ನಡೆಸಿಕೊಡುವ ಟಿವಿ ಶೋಗಳು ಪ್ರಸಾರವಾಗದಂತೆ ಮತ್ತು ಅವರು ನಟಿಸಿರುವ ಜಾಯಿರಾತುಗಳು ಸಹ ಪ್ರಸಾರವಾಗದಂತೆ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಜರುಗಿಸಬೇಕು ಎಂದು ಶ್ರೀಪಾಲ ದೂರಿನಲ್ಲಿ ಉಲ್ಲೇಖಿಸಿದ್ದರು.
ಸುದೀಪ್ ರಾಜಕೀಯ ಪಕ್ಷದ ಪರವಾಗಿ ಪ್ರಚಾರಮಾಡುವುದಾಗಿ ಸ್ವತಃ ಸುದೀಪ್ ಘೋಷಿಸಿದ್ದಾರೆ. ಇದೀಗ ಸುದೀಪ್ ನಟನೆಯ ಚಲನ ಚಿತ್ರಗಳು, ಟಿವಿ ಶೋ ಹಾಗೂ ಜಾಹಿರಾತುಗಳು ಮತದಾರರ ಮೇಲೆ ಪ್ರಭಾವ ಬೀರಲಿದೆ. ಇದು ಚುನಾವಣಾ ನೀತಿ ಸಂಹಿತೆಯ ಸ್ಪಷ್ಟ ಉಲ್ಲಂಘನೆ ಆಗಿದೆ. ಹೀಗಾಗಿ ತಕ್ಷಣದಿಂದ ಚುನಾವಣಾ ಆಯೋಗ ಈ ವಿಷಯಕ್ಕೆ ಸಂಬಂದಿಸಿದಂತೆ ತುರ್ತು ಕ್ರಮ ಜರುಗಿಸಬೇಕೆಂದು ಶ್ರೀಪಾಲ್ ಮನವಿ ಮಾಡಿದ್ದರು.