ಸುದ್ದಿಮೂಲವಾರ್ತೆ
ಕೊಪ್ಪಳ,ಸೆ.1: ಕೃಷಿ ಇಲಾಖೆ ಹಾಗೂ ಕೃಷಿ ಸಂಬಂಧಿತ ಇತರೆ ಇಲಾಖೆಗಳು, ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆಯಡಿ ಸಮನ್ವಯ ಸಾಧಿಸಿಕೊಂಡು ಕಾರ್ಯಕ್ರಮ ಅನುಷ್ಟಾನ ಮಾಡಲು ಕ್ರಮ ಕೈಗೊಳ್ಳಬೇಕು ಎಂದು
ಜಲಾನಯನ ಕೋಶ ಮತ್ತು ದತ್ತಾಂಶ ಕೇಂದ್ರ ಸಮಿತಿಯ ಅಧ್ಯಕ್ಷರು ಆಗಿರುವ ಜಿಲ್ಲಾಧಿಕಾರಿಗಳಾದ ನಲಿನ್ ಅತುಲ್ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಣ್ಣು ಮತ್ತು ನೀರು ಸಂರಕ್ಷಣಾ ಕಾಮಗಾರಿಗಳಡಿ ಕೈಗೊಳ್ಳುವ ಕಂದಕ ಬದು ನಿರ್ಮಾಣದಡಿ ತೋಟಗಾರಿಕೆ ಮತ್ತು ಅರಣ್ಯ ಸಸಿಗಳನ್ನು ನೆಟ್ಟು ಬದುಗಳನ್ನು ಬಲಪಡಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ತೋಟಗಾರಿಕೆ, ರೇಷ್ಮೆ, ಪಶುಸಂಗೊಪನಾ ಮತ್ತು ಪಶುವೈದ್ಯಕೀಯ, ಮೀನುಗಾರಿಕೆ, ಸಾಮಾಜಿಕ ಅರಣ್ಯ ವಿಭಾಗ, ಸಹಕಾರ, ಕೃಷಿ ಮಾರುಕಟ್ಟೆ, ಕೃಷಿ ವಿಸ್ತರಣಾ ಕೇಂದ್ರ ಹಾಗೂ ಕೃಷಿ ವಿಜ್ಞಾನ ಕೇಂದ್ರ ಸಂಸ್ಥೆಗಳ ಜಿಲ್ಲಾಮಟ್ಟದ ಅಧಿಕಾರಿಗಳನ್ನು ಜಿಲ್ಲಾ ಮಟ್ಟದ ತಾಂತ್ರಿಕ ಸಮಿತಿಯ (ಡಿ.ಎಲ್.ಟಿ.ಸಿ) ಸದಸ್ಯರುಗಳನ್ನಾಗಿ ಸೇರಿಸಲು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಇದೆ ವೇಳೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಜಲಾನಯನ ಕೋಶ ಮತ್ತು ದತ್ತಾಂಶ ಕೇಂದ್ರ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಆದ ಜಂಟಿ ಕೃಷಿ ನಿರ್ದೇಶಕರಾದ ರುದ್ರೇಶಪ್ಪ ಟಿ.ಎಸ್ ಅವರು ವಿಶ್ವ ಬ್ಯಾಂಕ್ ನೆರವಿನ ರೀವರ್ಡ್ ಯೋಜನೆಯ ರೂಪರೇಷೆಗಳನ್ನು ವಿವರಿಸಿದರು. ಈ ಯೋಜನೆಯನ್ನು ರಾಜ್ಯದ 20 ಜಿಲ್ಲೆಗಳ 20 ಉಪ ಜಲಾನಯನ ಕ್ಷೇತ್ರಗಳಲ್ಲಿ ಅನುಷ್ಠಾನ ಮಾಡಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಅಳವಂಡಿ ಹೋಬಳಿಯ ಅಳವಂಡಿ, ಕವಲೂರು, ಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಮುರ್ಲಾಪೂರ ಉಪ ಜಲಾನಯನದ 14 ಕಿರು ಜಲಾನಯನಗಳಲ್ಲಿ ಕಾರ್ಯಕ್ರಮಗಳನ್ನು ಅನುಷ್ಟಾನಗೊಳಿಸಲು ಕೇಂದ್ರ ಕಚೇರಿಯಿಂದ ಅನುಮೋದನೆ ದೊರಕಿದೆ. ಈ ಯೋಜನೆಯಲ್ಲಿ ಪ್ರಮುಖವಾಗಿ ತಾಂತ್ರಿಕ ಪಾಲುದಾರರಾದ ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಇವರು ಉಪ ಜಲಾನಯನ ಭೂ ಸಂಪನ್ಮೂಲ ಸಮೀಕ್ಷೆ (ಎಲ್.ಆರ್.ಐ) ಮಾಡಿ, ಮಣ್ಣು ಮತ್ತು ನೀರು ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿಗಳು ಹಾಗೂ ಅಟ್ಲಾಸ್ ನಕ್ಷೆಗಳನ್ನು ಸಿದ್ಧಪಡಿಸಿ ನೀಡಿರುತ್ತಾರೆ. ಇವುಗಳ ಆಧಾರದ ಮೇಲೆ ಜಲಾನಯನ ಪ್ರದೇಶದ ಪ್ರತಿ ಸರ್ವೇ ನಂಬರಗಳ ಮಣ್ಣಿನ ವಿಧ, ಮಣ್ಣಿನ ಆಳ, ಇಳಿಜಾರು, ಮಣ್ಣಿನಲ್ಲಿರುವ ಪೋಷಕಾಂಶಗಳ ಪ್ರಮಾಣ, ಕೊರತೆ, ಮಣ್ಣಿಗೆ ನೀರು ಮತ್ತು ಪೋಷಕಾಂಶಗಳನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಮತ್ತು ಇತರೆ ಗುಣಧರ್ಮಗಳ ಬಗ್ಗೆ ಹಾಗೂ ಜಲಾನಯನ ಪ್ರದೇಶದ ಸರಾಸರಿ ಮಳೆಯ ಪ್ರಮಾಣ ಈ ಎಲ್ಲಾ ಅಂಶಗಳ ಆಧಾರದ ಮೇಲೆ ಜಲಾನಯನ ಪ್ರದೇಶದ ಪ್ರತಿ ಸರ್ವೇ ನಂಬರವಾರು ವೈಜ್ಞಾನಿಕವಾಗಿ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು, ಸೂಕ್ತ ಬೆಳೆಗಳನ್ನು (ಕೃಷಿ, ತೋಟಗಾರಿಕೆ ಮತ್ತು ಕೃಷಿ ಅರಣ್ಯ) ಶಿಫಾರಸ್ಸು ಮಾಡಿರುತ್ತಾರೆ ಎಂದರು.
ಎಲ್ಲಾ ವೈಜ್ಞಾನಿಕ ಅಂಶಗಳ ಆಧಾರದ ಮೇಲೆ ಕಿರು ಜಲಾನಯನ ವಾರು ಮತ್ತು ಸರ್ವೇ ನಂ. ವಾರು ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳ ಕುರಿತು ಯೋಜನಾ ಪ್ರದೇಶದ ರೈತರುಗಳೊಂದಿಗೆ ಸಮುದಾಯ ಸಮಾಲೋಚನೆ, ಕ್ಷೇತ್ರ ಭೇಟಿ ಮತ್ತು ಪಿ.ಆರ್.ಎ ಮೂಲಕ ಚರ್ಚಿಸಿ ಕರಡು ಯೋಜನೆಯನ್ನು ಸಿದ್ದಪಡಿಸಿ, ಗ್ರಾಮ ಸಭೆಯಲ್ಲಿ ಅನುಮೋದನೆ ಪಡೆಯಲಾಗಿರುತ್ತದೆ ಎಂದರು. ಯೋಜನಾ ಪ್ರದೇಶದ ವಿಸ್ತಿರ್ಣ, ಕಿರು ಜಲಾನಯನಗಳು, ಗ್ರಾಮ ಪಂಚಾಯತಿಗಳು ಹಾಗೂ ಗ್ರಾಮಗಳ ವಿವರ ಹಾಗೂ ಜಲಾನಯನ ಕಾರ್ಯಕಾರಿ ಸಮಿತಿಗಳ ವಿವಿರಗಳನ್ನು ಹಾಗೂ ಈ ಕರಡು ಯೋಜನೆಯ ಮೂಲಕ ತಯಾರಿಸಲಾದ ವಿಸ್ತೃತ ಕ್ರಿಯಾ ಯೋಜನೆಯ ವಿವರಗಳನ್ನು ಜಿಲ್ಲಾ ಮಟ್ಟದ ಅನುಮೋದನಾ ಸಮಿತಿಯ ಮುಂದೆ ವಿವರಿಸಿದರು.
ಸಭೆಯಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕರಾದ ಕೃಷ್ಣ ಉಕ್ಕುಂದ ಸೇರಿದಂತೆ ಅರಣ್ಯ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಅರಣ್ಯ ಇಲಾಖೆ, ಮೀನುಗಾರಿಕೆ, ರೇಷ್ಮೆ ಹಾಗೂ ಪಶು ಇಲಾಖೆ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.