ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ, ಮೇ 15: ದೇಶದಲ್ಲಿ ಇನ್ನು ಪ್ರಾದೇಶಿಕ ಪಕ್ಷಗಳು ಮುಗಿದ ಅಧ್ಯಾಯವಾಗಿದ್ದು, ದೇಶದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಮಾತ್ರ ಉಳಿಯಲಿರುವುದರಿಂದ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಅತಿ ಕಡಿಮೆ ಪ್ರಮಾಣದ ಮತಗಳನ್ನು ಪಡೆದಿರುವ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಆತ್ಮಾವಲೋಕನ ಮಾಡಿಕೊಂಡು ರಾಷ್ಟ್ರೀಯ ಪಕ್ಷ ಬಿಜೆಪಿಯಲ್ಲಿ ವಿಲೀನವಾಗುವುದು ಸೂಕ್ತ ಎಂದು ಚಿಕ್ಕಬಳ್ಳಾಪುರ ಕ್ಷೇತ್ರದ ಪರಾಜಿತ ಅಭ್ಯರ್ಥಿ, ಮಾಜಿ ಸಚಿವ ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.
ಅವರಿಂದು ಚಿಕ್ಕಬಳ್ಳಾಪುರದಲ್ಲಿ ನಡೆದ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಮಾತನಾಡಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ರಾಜ್ಯದ ಹಿತದೃಷ್ಟಿಯಿಂದ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಸರ್ಕಾರದ ಬಗ್ಗೆ ವಿರೋಧ ಪಕ್ಷಗಳು ಮಾಡಿದ ಅಪಪ್ರಚಾರದಿಂದಾಗಿ ಪಕ್ಷಕ್ಕೆ ಸೋಲಾಗುವಂತಾಯಿತು. ಈಗ ಪಕ್ಷ ಸೋಲಿನ ಕಾರಣಗಳ ಕುರಿತು ಆತ್ಮಾವಲೋಕನ ಮಾಡಿಕೊಳ್ಳುತ್ತಿದೆ ಎಂದರು.
ಈ ಪರಿಯ ಸೋಲನ್ನು ಪಕ್ಷ ನಿರೀಕ್ಷಿಸಿರಲಿಲ್ಲ. ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಾಂಗ್ರೆಸ್ ಪಕ್ಷದೊಂದಿಗೆ ಮಾಡಿಕೊಂಡ ಹೊಂದಾಣಿಕೆ ರಾಜಕಾರಣ ಮತ್ತು ಷಡ್ಯಂತ್ರಗಳ ಫಲವಾಗಿ ಸ್ಥಳೀಯವಾಗಿ ಸೋಲಾಗಿದೆ. ಸೋಲಿಗೆ ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ತೊಡಗಿ ಮುಂಬರುವ ಎಲ್ಲಾ ಚುನಾವಣೆಗಳಿಗೂ ಕಾರ್ಯಕರ್ತರು ಮತ್ತು ಪಕ್ಷವನ್ನು ಸಶಕ್ತಗೊಳಿಸಲಾಗುವುದು. ಸೋಲಿನ ವಿಚಾರದಲ್ಲಿ ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಪ್ರಾದೇಶಿಕ ಪಕ್ಷಗಳು ದೇಶದಲ್ಲಿ ಮುಗಿದ ಅಧ್ಯಾಯ. ಇನ್ನು ಮುಂದೆ ಎರಡೇ ರಾಷ್ಟ್ರೀಯ ಪಕ್ಷಗಳು ದೇಶದಲ್ಲಿ ರಾಜಕಾರಣ ಮಾಡುವ ಕಾಲ. ಈ ಹಿನ್ನೆಲೆಯಲ್ಲಿ ಕಡಿಮೆ ಮತಗಳು ಮತ್ತು ಕಡಿಮೆ ಸ್ಥಾನಗಳನ್ನು ಪಡೆದಿರುವ ಜೆಡಿಎಸ್ ಪಕ್ಷದ ಮುಖಂಡರು ಆತ್ಮಾವಲೋಕನ ಮಾಡಿಕೊಂಡು ದೇಶದ ಹಿತದೃಷ್ಟಿಯಿಂದ ಬಿಜೆಪಿಯಲ್ಲಿ ವಿಲೀನಗೊಳ್ಳುವುದು ಒಳ್ಳೆಯದು ಎಂದು ಡಾ.ಕೆ.ಸುಧಾಕರ್ ಅಭಿಪ್ರಾಯಪಟ್ಟರು.