ಸುದ್ದಿಮೂಲ ವಾರ್ತೆ
ಚಿಕ್ಕಬಳ್ಳಾಪುರ,ಸೆ13: ಸೋಲು ಗೆಲುವುಗಳನ್ನು ಸಮಾನವಾಗಿ ಸ್ವೀಕಾರ ಮಾಡುವ ಮನೋಪ್ರವೃತ್ತಿ ಬೆಳೆಸಿಕೊಳ್ಳಬೇಕು. ವ್ಯಾಯಾಮ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಸಾಧ್ಯ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎ.ಅರುಣಾ ಕುಮಾರಿ ತಿಳಿಸಿದರು.
ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಆಯೊಜಿಸಿದ್ಧ “ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನಾಚರಣೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎಸ್.ಮಹೇಶ್ ಕುಮಾರ್ ಮಾತನಾಡಿ. ಜಿಲ್ಲೆಯಲ್ಲಿರುವ 14 ಲಕ್ಷ ಜನಸಂಖ್ಯೆಯ ಶೇ.10 ರಷ್ಟು ಜನರಿಗೆ ಮಾನಸಿಕ ಕಾಯಿಲೆಗಳಿರುತ್ತವೆ. ಆರಂಭಿಕ ಹಂತದಲ್ಲೇ ಕಾಯಿಲೆಗಳನ್ನು ಗುರುತಿಸಿಕೊಂಡು ಮಾನಸಿಕ ರೋಗ ತಜ್ಙರಿಂದ ಚಿಕಿತ್ಸೆ ಪಡೆದರೆ ಆರೋಗ್ಯ ವೃದ್ಧಿಸುತ್ತದೆ ಎಂದರು.
ಜಿಲ್ಲಾ ಶಸ್ತ್ರಚಿಕಿತ್ಸಕಿ ಡಾ.ಕೆ.ಮಂಜುಳಾ ದೇವಿ ಅವರು ಮಾತನಾಡಿ, 15-24 ರ ವಯೋಮಾನದ ಹೆಣ್ಣು ಮಕ್ಕಳಲ್ಲಿ ಆತ್ಮಹತ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಸದಾ ಬೇಜಾರು, ಒಂಟಿಯಾಗಿರುವುದು, ದುಶ್ಚಟಗಳು, ನಕಾರಾತ್ಮಕ ಚಿಂತನೆ ಹೀಗೆ ಇನ್ನಿತರ ಕಾರಣಗಳಿಂದ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆಯನ್ನು ತಡೆಗಟ್ಟಲು ಪೋಷಕರು ಮಕ್ಕಳನ್ನು ಸ್ನೇಹಿತರಂತೆ ಕಾಣಬೇಕು. ಇತ್ತೀಚೆಗೆ ಮಹಿಳೆಯರೂ ಕೂಡ ತಂಬಾಕು ಉತ್ಪನ್ನಗಳ ಸೇವನೆ ಹಾಗೂ ಮಾದಕ ವ್ಯಸನಗಳಿಗೆ ಶರಣಾಗುತ್ತಿದ್ದಾರೆ. ಇಂತಹ ವ್ಯಸನಗಳನ್ನು ಬಿಟ್ಟು, ಅಪರೂಪದ, ಅಮೂಲ್ಯ ಮನುಷ್ಯ ಜೀವನವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮನೋವೈದ್ಯೆ ಡಾ.ಎ.ಲಾವಣ್ಯ ಮಾತನಾಡಿ, ಖಿನ್ನತೆಗೆ ಒಳಗಾಗುವರಲ್ಲಿ ಕಂಡುಬರುವ ಲಕ್ಷಣಗಳೆಂದರೆ ಒತ್ತಡಕ್ಕೆ ಒಳಗಾಗುವುದು, ಸದಾ ಬೇಜಾರು, ಕೆಲಸದಲ್ಲಿ ನಿರಾಸಕ್ತಿ,ನಿರಂತರ ಆಯಾಸ, ನಿದ್ರೆ, ಒಂಟಿಯಾಗಿ ಇರುವುದು, ಹಸಿವಿನಲ್ಲಿ ಏರು-ಪೇರು, ತೂಕದಲ್ಲಿ ವ್ಯತ್ಯಾಸ ಕಂಡು ಬರುವುದು ಹೀಗೆ ಖಿನ್ನತೆಗೆ ಹಲವಾರು ಕಾರಣಗಳಿವೆ. ಇಂತಹ ಖಿನ್ನತೆಗೆ ಒಳಗಾದವರಲ್ಲಿ ಶೇ.5 ರಿಂದ 7 ರಷ್ಟು ಮಕ್ಕಳು ಆತ್ಮಹತ್ಯೆಗೆ ಒಳಗಾಗುತ್ತಿದ್ದಾರೆ .ಯಾವುದೇ ರೀತಿ ಆತ್ಮಹತ್ಯೆ ಲಕ್ಷಣಗಳು,ಆಲೋಚನೆಗಳು ಕಂಡು ಬಂದರೆ ಉಚಿತ ಮಾನಸಿಕ ಆರೋಗ್ಯ ಸಹಾಯವಾಣಿಯಾದ 14416 (ಟೆಲಿಮನಸ್) ಗೆ ಕರೆ ಮಾಡಬಹುದು. ಎಂದು ತಿಳಿಸಿದರು.
ಆತ್ಮಹತ್ಯೆ ತಡೆ ಕುರಿತು ಜಾಗೃತಿ ಮೂಡಿಸುವ ಕರ ಪತ್ರಗಳು ಹಾಗೂ ಬಿತ್ತಿ ಪತ್ರಗಳನ್ನು ಈ ವೇಳೆ ಬಿಡುಗಡೆ ಮಾಡಲಾಯಿತು.