ಸುದ್ದಿಮೂಲ ವಾರ್ತೆ
ಮೈಸೂರು, ಆ.31 : ಇಲ್ಲಿನ ಚಾಮುಂಡಿ ಪುರಂನ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೆತ್ ನೋಟ್ ಆಧಾರದ ಮೇಲೆ ಪೊಲೀಸರು ನಾಲ್ವರನ್ನು ಬಂಧಿಸಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ.
ಮೊದಲ ಆರೋಪಿ ಮಂಜುನಾಥ, ಐದನೇ ಆರೋಪಿ ರಮೇಶ್, ಆರನೇ ಆರೋಪಿ ಮಹದೇವ್ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಎರಡನೇ ಆರೋಪಿ ಅನಿತಾ ಹಾಗೂ ಮೂರನೇ ಆರೋಪಿ ಕೋಟೆ ಹುಂಡಿ ಮಹದೇವ್ ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಪೋಲಿಸರು ಬಲೆ ಬೀಸಿದ್ದಾರೆ.
ಪ್ರಕರಣದ ವಿವರ
ಕಳೆದ ಭಾನುವಾರ ಚಾಮುಂಡಿಪುರಂನ ಮೊದಲನೇ ಮುಖ್ಯರಸ್ತೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಮಹದೇವ ಸ್ವಾಮಿ, ಅವರ ಪತ್ನಿ ಅನಿತಾ ಮತ್ತು ಇಬ್ಬರು ಪುತ್ರಿಯರಾದ ಧನಲಕ್ಷ್ಮಿ ಹಾಗೂ ಚಂದ್ರಕಲಾ ಶವವಾಗಿ ಪತ್ತೆಯಾಗಿದ್ದರು. ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಮಹದೇವ ಸ್ವಾಮಿ, ಎಪಿಎಂಸಿಯಲ್ಲಿ ತರಕಾರಿ ಮಾರಾಟದ ದಲ್ಲಾಳಿ ಕೆಲಸ ಮಾಡಿಕೊಂಡಿದ್ದು, ಎಪಿಎಂಸಿ ಮಾರುಕಟ್ಟೆಯಲ್ಲಿ ಸ್ವಂತ ಚಿಕ್ಕ ಮಳಿಗೆ ಹೊಂದಿದ್ದರು. ಇತ್ತೀಚೆಗೆ ಇದನ್ನು ಮಾರಾಟ ಮಾಡಲು ನಿರ್ಧರಿಸಿ ಮಾರುಕಟ್ಟೆಯಲ್ಲಿಯೇ ವ್ಯವಹಾರ ಮಾಡಿಕೊಂಡಿದ್ದ ವ್ಯಕ್ತಿಗಳಿಗೆ ಮಾರಾಟದ ಒಪ್ಪಂದ ಪತ್ರವನ್ನು ಮಾಡಿ, ಮಹದೇವ ಸ್ವಾಮಿ ಸ್ವಲ್ಪ ಹಣ ಮುಂಗಡವಾಗಿ ಪಡೆದುಕೊಂಡಿದ್ದರು.
ಆದರೆ ಪತ್ನಿ ಮಳಿಗೆ ಮಾರಲು ಒಪ್ಪದ ಕಾರಣ, ಒಪ್ಪಂದ ಪತ್ರವನ್ನು ರದ್ದುಗೊಳಿಸಲು ಕೇಳಿಕೊಂಡಿದ್ದರು. ಆದರೆ ಮಾರಾಟ ಒಪ್ಪಂದ ಮಾಡಿಕೊಂಡಿದ್ದ ಸಂದರ್ಭದಲ್ಲಿ ಮುಂಗಡ ಹಣ ಪಡೆದಿದ್ದ ಹಣವನ್ನು ಖರ್ಚು ಮಾಡಿಕೊಂಡಿದ್ದರು. ಇದರಿಂದ ಮುಂಗಡ ಹಣ ಕೊಡುವಂತೆ ಒಪ್ಪಂದ ಮಾಡಿಕೊಂಡವರು ಬೆದರಿಕೆ ಹಾಕಿದ್ದರು ಎನ್ನಲಾಗಿದೆ. ಇದರಿಂದ ಬೆದರಿದ ಮಹದೇವ ಸ್ವಾಮಿ ತನಗೆ ಬೆದರಿಕೆ ಹಾಕಿದ ಆರು ಜನರ ಹೆಸರನ್ನು ಆತ್ಮಹತ್ಯೆಗೆ ಕಾರಣವಾಗಿದ್ದಾರೆ ಎಂದು ಡೆತ್ ನೋಟ್ ಬರೆದಿಟ್ಟು ಕುಟುಂಬಸಮೇತ ಆತ್ಮಹತ್ಯೆಗೆ ಶರಣಾಗಿದ್ದರು ಕೆ.ಆರ್.ಠಾಣಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆತ್ಮಹತ್ಯೆ ತಡೆಗಟ್ಟಲು ಮತ್ತು ಮಾನಸಿಕ ಖಿನ್ನತೆಯಿಂದ ಬಳಲುವವರಿಗಾಗಿ ನಿಮ್ಹಾನ್ಸ್, ರೋಟರಿ ಸಂಸ್ಥೆ ಹಾಗೂ ಮೆಡಿಕೊ ಪ್ಯಾಸ್ಟೊರಾಲ್ ಅಸೋಸಿಯೇಷನ್ ಸಹಯೋಗದೊಂದಿಗೆ SAHAI ಸಹಾಯವಾಣಿ ಕಾರ್ಯನಿರ್ವಹಿಸುತ್ತಿದೆ. ಸಂಪರ್ಕಸಂಖ್ಯೆ: 080 – 25497777