ಜೇವರ್ಗಿ, ಜೂ.30 : ಕುಡಿಯುವ ನೀರು ಮೆಡಿಕಲ್ ಟೆಸ್ಟ್ ಮಾಡಿ, ಎಲ್ಲ ಓವರ್ ಹೆಡ್ ಟ್ಯಾಂಕ್ ಗಳನ್ನು ಶುದ್ಧಗೊಳಿಸಿ ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಭನ್ವಾರ್ ಸಿಂಗ್ ಮಿನಾ ಅಧಿಕಾರಿಗಳಿಗೆ ಸೂಚಿಸಿದರು.
ಜೇವರ್ಗಿ ತಾಲೂಕು ಪಂಚಾಯತ್ ಹಳೆ ಸಭಾಂಗಣದಲ್ಲಿ ಶುಕ್ರವಾರ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ಸ್ಯಾಂಪಲ್ ಟೆಸ್ಟ್ 2 ರಿಂದ 3 ಬಾರಿ ಮಾಡಿಸಬೇಕು, ನೀರಿನ ಪೈಪ್ ಗಳು ಡ್ಯಾಮೆಜ್ ಕಂಡುಬಂದಲ್ಲಿ ಅವುಗಳನ್ನು ಕೂಡಲೇ ದುರಸ್ತಿ ಮಾಡಿಸಬೇಕು ಹಾಗೂ ಸ್ವಚ್ಛತೆಗೆ ಒತ್ತು ಕೊಡಬೇಕು ಎಂದು ತಾಕೀತು ಮಾಡಿದರು.
ಇದಕ್ಕೂ ಮೊದಲು ಮಹಾತ್ಮ ಗಾಂಧಿನರೇಗಾ ಯೋಜನೆ ಪ್ರಗತಿ ಪರಿಶೀಲಿಸಿದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪಿಡಿಓ ರವರು ಗ್ರಾಮ ಪಂಚಾಯತಿಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿ ಬಗೆಹರಿಸಬೇಕು, ಕರವಸೂಲಿ, ವಾರ್ಡ್ ಸಭೆ ಮಾಡಿ ಎಲ್ಲ ಯೋಜನೆಗಳ ಪ್ರಗತಿ ಸಾಧಿಸಬೇಕು ಎಂದು ಸೂಚಿಸಿದರು.
ಸಿಬ್ಬಂದಿಗಳು ಅನಗತ್ಯ ಗೈರಾಗುವಂತಿಲ್ಲ.
ಇ- ಹಾಜರಾತಿ ಕಡ್ಡಾಯವಾಗಿದ್ದು, ಎಲ್ಲ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇ-ಹಾಜರಾತಿ ನೋಂದಣಿ ಮಾಡಿಸಿಕೊಳ್ಳಬೇಕು. ನಿತ್ಯ ತಮ್ಮ ಕಾರ್ಯಾಲಯದ ವ್ಯಾಪ್ತಿಯಲ್ಲಿದ್ದು, ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎಂದರು.
ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಅಬ್ದುಲ್ ನಬಿ,ಸಹಾಯಕ ನಿರ್ದೇಶಕ ಸೋಮಶೇಖರ್ ಜಾಡರ್, ತಾ.ಪಂ ವ್ಯವಸ್ಥಾಪಕ ಸುಭಾಷ್ ಶಂಕರ, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಎಲ್ಲ ಯೋಜನೆಗಳ ವಿಷಯ ನಿರ್ವಾಹಕರು, ತಾಂತ್ರಿಕ ಸಯೋಜಕರು, ತಾಂತ್ರಿಕ ಸಹಾಯಕರು, ಎಮ್.ಐ.ಎಸ್ ಸಂಯೋಜಕರು, ಐಇಸಿ ಸಂಯೋಜಕರು ಮತ್ತು ಗ್ರಾಮ ಪಂಚಾಯತಿ ಡಿಇಓ ರವರು ಸಭೆಯಲ್ಲಿ ಭಾಗವಹಿಸಿದ್ದರು.