ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.22: ಗುತ್ತಿಗೆದಾರರಿಂದ ಕಮಿಷನ್ ಆರೋಪದಿಂದ ಸಚಿವ ಸ್ಥಾನ ಕಳೆದುಕೊಂಡ ಕೆ.ಎಸ್. ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಪ್ರಧಾನಿ ನರೇಂದ್ರ ಮೋದಿ 40 ಕಮಿಷನ್ ಆರೋಪವನ್ನು ಅನುಮೋದಿಸಿದ್ದಾರೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಕಚೇರಿ ದೊಡ್ಡ ಅಪರಾಧ ಎಸಗಿದೆ. ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಈಶ್ವರಪ್ಪಗೆ ಕರೆ ಮಾಡಿದ್ದಾರೆ. ಇದು ಭಾರತ ಇತಿಹಾಸ, ಕರ್ನಾಟಕದ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯಲಿದೆ. ಕರೆ ಮಾಡುವ ಮೂಲಕ ಪಿಎಂ ಶೇ 40ರಷ್ಟು ಭ್ರಷ್ಟಾಚಾರಕ್ಕೆ ಅನುಮೋದನೆ ನೀಡಿದ್ದಾರೆ ಎಂದು. ಆರೋಪಿಸಿದರು.
ಪಿಎಂ ಮೋದಿ ರಾಜಕೀಯ ಲಾಭಕ್ಕಾಗಿ ಯಾವುದೇ ಹಂತಕ್ಕೂ ಇಳಿಯಬಹುದು. ಈಶ್ವರಪ್ಪ ಜೊತೆ ಕರೆ ಮಾಡಿ, ನಗು ನಗುತ್ತಾ ಮಾತನಾಡಿದ್ದಾರೆ. ಈಶ್ವರಪ್ಪ ಕಮಿಷನ್ ಆರೋಪದಲ್ಲಿ ಮಂತ್ರಿಗಿರಿಯಿಂದ ವಜಾ ಮಾಡಿಲ್ಲವೇ? ಇದೇ ಪ್ರಧಾನಿಯವರು ಆತ್ಮಹತ್ಯೆ ಮಾಡಿಕೊಂಡ ಸಂತೋಷ್ ಪಾಟೀಲ್ ಪತ್ನಿ ಜೊತೆ ಮಾತನಾಡಿದ್ದಾರಾ? ಅವರ ತಂದೆ ತಾಯಿ ಜೊತೆ ಮಾತನಾಡಿದ್ದಾರಾ? ಈಶ್ವರಪ್ಪ ಬಿಜೆಪಿ ಮುಖಂಡ ಆರಬಹುದು. ಆದರೆ, ಪ್ರಕರಣ ನ್ಯಾಯಾಲಯದಲ್ಲಿದೆ. ಅಂತಹವರ ಜೊತೆ ಪ್ರಧಾನಿ ಮಾತನಾಡಿದ್ದೇಕೆ ಎಂದು ಕಿಡಿ ಕಾರಿದರು.
ಫೈಟರ್ ರವಿ ಮುಂದೆ ಕೈ ಮುಗಿದು ಮೋದಿ ನಿಂತಿದ್ದರು. ಡಬಲ್ ಇಂಜಿನ್ ಸರ್ಕಾರ ಡಬಲ್ ದ್ರೋಹ ಸರ್ಕಾರವಾಗಿದೆ. ಈಶ್ವರಪ್ಪ ಅವರಿಗೆ ಕರೆ ಮಾಡಿರುವ ಬಗ್ಗೆ ನೀವು ಸ್ಪಷ್ಟೀಕರಣ ನೀಡಬೇಕು. ನಿಮ್ಮ ವರ್ತನೆ ಪಿಎಂ ಕಚೇರಿಯ ಗೌರವಕ್ಕೆ ಚ್ಯುತಿ ತಂದಿದೆ. ನೈತಿಕವಾಗಿ ಪ್ರಧಾನಿ ಕಚೇರಿ ಮೇಲೆ ಪ್ರಶ್ನೆ ಮೂಡಿದೆ ಎಂದು ಸುರ್ಜೇವಾಲ ಹೇಳಿದರು.
ಸರ್ಕಾರ ತಲೆಯಿಂದ ಮುಡಿಯವರೆಗೆ ಭ್ರಷ್ಟಾಚಾರದಿಂದ ಮುಳುಗಿದೆ. ರಾಜ್ಯದ ಜನರ ಮುಂದೆ ಮತ ಕೇಳುವ ನೈತಿಕ ಹಕ್ಕನ್ನು ಮೋದಿ ಕಳೆದುಕೊಂಡಿದ್ದಾರೆ. ಆಯನೂರು ಮಂಜುನಾಥ್, ಶೆಟ್ಟರ್ ಆಗಿರಲಿ, ಅವರ ಹಲವು ಶಾಸಕರು ಬೊಮ್ಮಾಯಿ ಸರ್ಕಾರ ತಲೆಯಿಂದ ಮುಡಿಯವರೆಗೆ ಭ್ರಷ್ಟಾಚಾರದಿಂದ ಮುಳುಗಿದೆ ಎಂದು ಆರೋಪಿಸಿದ್ದಾರೆ. ನೆಹರೂ ಓಲೇಕರ್ ಅವರು ಲಂಚದ ಆರೋಪ ಮಾಡಿದ್ದಾರೆ. ಅದರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಏನೂ ಹೇಳಿಲ್ಲ ಎಂದು ಟೀಕಿಸಿದರು.