ಸುದ್ದಿಮೂಲ ವಾರ್ತೆ
ಬೆಂಗಳೂರು, ಏ.5: ಕನ್ನಡದ ಜನಪ್ರಿಯ ನಟ ಕಿಚ್ಚ ಸುದೀಪ್ ಅವರು ಬಿಜೆಪಿಗೆ ಬೆಂಬಲ ಸೂಚಿಸಿದ್ದನ್ನು ಸಹಿಸಲಾಗದೆ ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿಯಾದ ರಣದೀಪ್ ಸುರ್ಜೇವಾಲಾರವರು “ಇ.ಡಿ. ಕೇಸನ್ನು ತಪ್ಪಿಸಲು ಸುದೀಪ್ ಬಿಜೆಪಿ ಸೇರಿದ್ದಾರೆ” ಎಂದು ಆರೋಪಿಸಿದ್ದಾರೆ. ಇದು ಎಸ್ಟಿ ಸಮುದಾಯಕ್ಕೆ ಮಾಡಿದ ಅವಮಾನ ಮತ್ತು ಕನ್ನಡದ ಕಲಾವಿದರಿಗೆ ಮಾಡಿದ ಅಪಮಾನ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು ಅವರು ತಿಳಿಸಿದ್ದಾರೆ.
ಕಷ್ಟದಲ್ಲಿ ಇದ್ದಾಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆರವಾದುದನ್ನು ಪರಿಗಣಿಸಿ, ಅವರ ಮೇಲಿನ ಗೌರವ, ಅಭಿಮಾನದಿಂದ ಸುದೀಪ್ ಅವರು ಬೊಮ್ಮಾಯಿ ಮತ್ತು ಬಿಜೆಪಿ ಬೆಂಬಲಿಸುವುದಾಗಿ ಹೇಳಿದ್ದಾರೆ. ಬಿಜೆಪಿ ಪಕ್ಷ ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ಹೋರಾಡುವಂತ ಪಕ್ಷ ಅಂತ ಸಮುದಾಯದಿಂದ ಬಂದಿರುವ ಸುದೀಪ್ ಅವರ ಬಗ್ಗೆ ಹೀಗೆ ಹೀನಾಯವಾಗಿ ಟೀಕಿಸಿರುವುದು ಒಪ್ಪಲಾಗುವುದಿಲ್ಲ ಎಂದಿದ್ದಾರೆ.
ಸಾಮಾಜಿಕ ನ್ಯಾಯಕ್ಕೆ ತಮ್ಮ ಸೇವೆ ಸಲ್ಲಿಸುತ್ತಿರುವ ಕಲಾವಿದರನ್ನು ಸುರ್ಜೇವಾಲಾ ಈ ಹೇಳಿಕೆ ನೀಡಿದ್ದು ಖಂಡನೀಯ ಎಂದು ತಿಳಿಸಿದ್ದಾರೆ. ಇದು ಎಸ್ಟಿ ಸಮುದಾಯಕ್ಕೆ ಮಾಡಿದ ಅವಮಾನ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಹುತೇಕ ನಿನ್ನೆ ಕಳುಹಿಸಿರುವ ಪತ್ರ ಯಾವುದೇ ಫಲ ನೀಡದೆ ಇರುವ ಕಾರಣದಿಂದ ಇವತ್ತು ಸುರ್ಜೇವಾಲಾ ಅವರು ಇಂತಹ ಸುಳ್ಳನ್ನು ಹಬ್ಬಿಸುತ್ತಿದ್ದಾರೆ ಎಂದು ಸಿದ್ದರಾಜು ಆರೋಪಿಸಿದ್ದಾರೆ.
ಆದರೆ, ಜನಮನ್ನಣೆ ಪಡೆದ ಚಿತ್ರನಟನಿಗೆ ಮತ್ತು ಜಾತಿಗೆ ಅವಮಾನ ಮಾಡಿದ ಸುರ್ಜೇವಾಲಾ ಹೇಳಿಕೆಯನ್ನು ರಾಜ್ಯದ ಪ್ರಜ್ಞಾವಂತ ಮತದಾರರು ಗಮನಿಸಿ, ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ನಾಮಾವಶೇಷ ಮಾಡುವುದು ಖಚಿತ ಎಂದು ಸಿದ್ದರಾಜು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.