ಸುದ್ದಿಮೂಲ ವಾರ್ತೆ
ಬೆಂಗಳೂರು,ಮಾ.27: ಮೀಸಲಾತಿಯ ಅಸಂವಿಧಾನಿಕ ಪರಿಷ್ಕರಣೆ ಈ ನಾಡಿಗೆ ಎಸಗಿರುವ ದ್ರೋಹ, ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕು ಎಂದು ಕಾಂಗ್ರೆಸ್ ನಾಯಕರು ಆಗ್ರಹಿಸಿದರು.
ವಿಪಕ್ಷ ನಾಯಕರಾದ ಸಿದ್ದರಾಮಯ್ಯ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ ಹಾಗೂ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರ ಜೊತೆಗೂಡಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಾ, ಇತ್ತೀಚೆಗೆ ಬಿಜೆಪಿ ಸರ್ಕಾರ ಮೀಸಲಾತಿ ವಿಚಾರವಾಗಿ ಗೊಂದಲ ಸೃಷ್ಟಿ ಮಾಡಿ, ಸೇಡಿನ ರಾಜಕಾರಣ ಮಾಡಿ ಜನರನ್ನು ಧರ್ಮ, ಜಾತಿ ಆಧಾರದ ಮೇಲೆ ಸಮಾಜ ವಿಭಜನೆ ಮಾಡುವ, ಜನರಿಗೆ ತಪ್ಪು ಮಾಹಿತಿ ನೀಡಿ ಮೋಸ ಮಾಡುವ ಪ್ರಯತ್ನವನ್ನು ಮಾಡಿದೆ. ಮೀಸಲಾತಿಯ ಹೊಸ ವರ್ಗೀಕರಣ ಮಾಡುವ ಮೂಲಕ ಬಿಜೆಪಿ ಸರ್ಕಾರ ನಾಡಿಗೆ ದ್ರೋಹ ಎಸಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಮ್ಮ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಒಕ್ಕಲಿಗರು 12% ಮೀಸಲಾತಿ ಕೇಳಿದ್ದರು, ವೀರಶೈವ ಲಿಂಗಾಯತರು 15% ಮೀಸಲಾತಿ ಮತ್ತು ತಮ್ಮನ್ನು 2ಎ ಗೆ ಸೇರಿಸುವಂತೆ ಕೇಳಿದ್ದರು. 1992ರಲ್ಲಿ ಇಂದಿರಾ ಸಹಾನಿ ಪ್ರಕರಣದಲ್ಲಿ 9 ಮಂದಿ ನ್ಯಾಯಮೂರ್ತಿಗಳ ಪೀಠವು ಮೀಸಲಾತಿ 50% ಮೀರಬಾರದು ಎಂದು ಹೇಳಿತ್ತು, ರಾಜ್ಯದಲ್ಲಿ ಈಗ ಮೀಸಲಾತಿ 50% ಇದೆ, ನ್ಯಾಯಾಲಯದ ಈ ತೀರ್ಪನ್ನು ಬದಲಾವಣೆ ಮಾಡಬೇಕಾಗಿರುವುದು ಸಂಸತ್ತು. ಬದಲಾವಣೆ ಮಾಡಿರುವುದು ಊರ್ಜಿತವಾಗಬೇಕಾದರೆ ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು. ಇವರು ಇದ್ಯಾವುದನ್ನಾದರೂ ಮಾಡಿದ್ದಾರ?
ಎಸ್,ಸಿ ಮತ್ತು ಎಸ್,ಟಿ ಗೆ ಮೀಸಲಾತಿ ಏರಿಕೆ ಮಾಡಲಾಗಿದೆ. ಇದು ನಮ್ಮ ಬೇಡಿಕೆಯೂ ಆಗಿತ್ತು. 2019ರಲ್ಲಿ ರಚನೆಯಾಗಿದ್ದ ನ್ಯಾ. ನಾಗಮೋಹನ್ ದಾಸ್ ಅವರ ಸಮಿತಿ 2020ರಲ್ಲಿ ವರದಿ ನೀಡಿತ್ತು, ವರದಿ ಬಂದು 3 ವರ್ಷ ಕಳೆದರೂ ಸರ್ಕಾರ ನಿದ್ದೆ ಮಾಡುತ್ತಿತ್ತು. ವಾಲ್ಮೀಕಿ ಶ್ರೀಗಳು 257 ದಿನಗಳ ಕಾಲ ಧರಣಿ ಮಾಡಿದರು, ಸದನದಲ್ಲಿ ನಮ್ಮ ಎಸ್,ಸಿ ಹಾಗೂ ಎಸ್,ಟಿ ಮತ್ತು ಹಿಂದುಳಿದ ಜಾತಿಗಳ ಶಾಸಕರು ಪ್ರತಿಭಟನೆ ಮಾಡಿದರು, ಪ್ರತೀ ಬಾರಿ ಸರ್ಕಾರ ನೆಪಗಳನ್ನು ಹೇಳಿ ಮುಂದಕ್ಕೆ ಹಾಕಿತ್ತು, ಆಗ ಯಾವುದೇ ತೀರ್ಮಾನ ಕೈಗೊಳ್ಳದೆ ಕೊನೆಗೆ ವಿಧಿಯಿಲ್ಲದೆ ಸರ್ವಪಕ್ಷ ಸಭೆಯನ್ನು ಕರೆದರು. ಈ ಸಭೆಯಲ್ಲಿ ನಾವು ಸರ್ಕಾರಕ್ಕೆ “ಮೀಸಲಾತಿ ಪ್ರಮಾಣ 56% ಆಗುತ್ತಿದೆ, ಇದು ಸಂವಿಧಾನ ಮತ್ತು ಇಂದಿರಾ ಸಹಾನಿ ಪ್ರಕರಣದ ತೀರ್ಪಿಗೆ ವಿರುದ್ಧವಾಗುತ್ತದೆ ಹೀಗಾಗಿ ಈ ಬಗ್ಗೆ ಸಂವಿಧಾನ ತಿದ್ದುಪಡಿ ಮಾಡಬೇಕು ಮತ್ತು ಸಂವಿಧಾನದ 9ನೇ ಶೆಡ್ಯೂಲ್ ಗೆ ಸೇರಿಸಬೇಕು” ಎಂದು ನಾವು ಸ್ಪಷ್ಟವಾಗಿ ಹೇಳಿದ್ದೆವು.
ಇದಾದ ನಂತರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತು, ಆ ನಂತರ ರಾಜ್ಯಪಾಲರು ಅದಕ್ಕೆ ಸಹಿ ಮಾಡಿದರು. 2022ರಲ್ಲಿ ಸರ್ಕಾರ ಕಾಯ್ದೆ ತಂದಿತು, ಆ ನಂತರ ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಒಂದು ಪತ್ರ ಬರೆದಿದೆಯಾ? ಎರಡು ಲೋಕಸಭಾ ಅಧಿವೇಶನಗಳು ನಡೆದವು, ಅಲ್ಲಿ ಚರ್ಚೆಗೆ ಬಂತಾ? ಕೇಂದ್ರ ಸರ್ಕಾರಕ್ಕೆ ಇದನ್ನು 9ನೇ ಶೆಡ್ಯೂಲ್ ಗೆ ಸೇರಿಸುವಂತೆ ಒತ್ತಾಯ ಮಾಡಿದೆಯಾ? ನಾವು ಪ್ರತಿಭಟನೆ ಮಾಡುತ್ತೇವೆ ಎಂಬುದು ಗೊತ್ತಾದ ಮೇಲೆ ಮೊನ್ನೆ 23ನೇ ತಾರೀಖಿನ ಸಂಜೆ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಚುನಾವಣೆ ಇನ್ನೇನು ಎರಡ್ಮೂರು ದಿನದೊಳಗೆ ಘೋಷಣೆ ಆಗುತ್ತದೆ ಎಂಬುದು ಗೊತ್ತಿದ್ದರೂ 24ರ ಸಂಜೆ ಈ ಮೀಸಲಾತಿ ಪರಿಷ್ಕರಣೆ ನೀತಿ ತಂದಿರುವುದರ ಹಿಂದಿನ ಉದ್ದೇಶ ಏನು? ಇದು ರಾಜಕೀಯ ಗಿಮಿಕ್ ಅಲ್ಲವೇ? ಯಾರಿಗೂ ನ್ಯಾಯ ಕೊಡಬೇಕು ಎಂಬುದು ಸರ್ಕಾರಕ್ಕೆ ಇಲ್ಲ ಎಂದರು.
ಇಂದು ರಾಜ್ಯದ ಜನರನ್ನು ವಂಚಿಸುವ ಕೆಲಸ ಮಾಡುತ್ತಿದ್ದಾರೆ. ಇದು ನಾಡಿನ ಜನರಿಗೆ ಮಾಡಿರುವ ದ್ರೋಹ ಮಾತ್ರವಲ್ಲ ಸಂವಿಧಾನಕ್ಕೆ ತೋರಿರುವ ಅಗೌರವವೂ ಹೌದು. ಇಡೀ ಸಾಮಾಜಿಕ ನ್ಯಾಯವನ್ನು ಛಿದ್ರಗೊಳಿಸಿ ಜನರಿಗೆ ನ್ಯಾಯ ಸಿಗಬಾರದು ಎಂದು ಈ ರೀತಿ ಮಾಡಿದ್ದಾರೆ. ರಾಜ್ಯ ಸರ್ಕಾರ ರಾಜಕೀಯ ಗಿಮಿಕ್ ಮಾಡಲು ಹೊರಟಿದೆ, ಇದನ್ನು ಜನ ಒಪ್ಪಬೇಕೆ? ಎಂದು ಪ್ರಶ್ನಿಸಿದರು
ಸಮಿತಿಯ ಶಿಫಾರಸಿಗೆ ವಿರುದ್ಧವಾಗಿ ಮೀಸಲಾತಿ ಪರಿಷ್ಕರಣೆ ಮಾಡಿರುವ ರಾಜ್ಯ ಸರ್ಕಾರವನ್ನು ವಜಾ ಮಾಡುವಂತೆ ಆಗ್ರಹಿಸುತ್ತೇನೆ. ಕೇಂದ್ರ ಸರ್ಕಾರ ಈ ಕೂಡಲೇ ಮಧ್ಯಪ್ರವೇಶ ಮಾಡಬೇಕು. ಈ ಸರ್ಕಾರಕ್ಕೆ ಸಂವಿಧಾನಾತ್ಮಕವಾಗಿ ಮುಂದುವರೆಯುವ ಹಕ್ಕು ಇಲ್ಲ.