ಬೆಂಗಳೂರಿನಲ್ಲಿ ಶಂಕಿತ ಉಗ್ರ ಆರೀಫ್ ಅರೆಸ್ಟ್
ಬೆಂಗಳೂರು, ಫೆ.11: ನಗರದ ಥಣಿಸಂದ್ರ ಮಂಜುನಾಥ ನಗರದಲ್ಲಿ ಬೆಳಗಿನ ಜಾವ ನಡೆದ ಮಿಂಚಿನ ಕಾರ್ಯಾಚರಣೆಯಲ್ಲಿ ಶಂಕಿತ ಉಗ್ರ ಆರೀಫ್ನನ್ನು ವಶಕ್ಕೆ ಪಡೆಯಲಾಗಿದೆ.
ಆಂತರಿಕ ಭದ್ರತಾ ವಿಭಾಗ (ಐ.ಎಸ್.ಡಿ) ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆಯಲ್ಲಿ ಆಲ್ ಖೈದಾ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ ವ್ಯಕ್ತಿಯನ್ನ ಬಂಧಿಸಲಾಗಿದೆ.
ಬಂಧಿತ ಆರೀಫ್ ಖಾಸಗಿ ಸಾಫ್ಟ್ವೇರ್ ಕಂಪನಿಯಲ್ಲಿ ಪ್ರಸ್ತುತ ವರ್ಕ್ ಫ್ರಮ್ ಹೋಮ್ ಕೆಲಸ ಮಾಡುತ್ತಿದ್ದ. ಕಳೆದ ಎರಡು ವರ್ಷಗಳಿಂದ ಆಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದ. ಆಲ್ ಖೈದಾಗೆ ಸಂಬಂಧಿಸಿದ ಟೆಲಿಗ್ರಾಂ ಮತ್ತಿತರ ಗ್ರೂಪ್ ಗಳಲ್ಲಿ ಸಕ್ರಿಯನಾಗಿದ್ದ. ಈತನಿಗೆ ಪತ್ನಿ ಜೊತೆ ಇಬ್ಬರು ಮಕ್ಕಳಿದ್ದು, ಈತ ಉಗ್ರ ಸಂಘಟನೆ ಜೊತೆ ಸಂಪರ್ಕ ಹೊಂದಿದ್ದರ ಬಗ್ಗೆ ಮಾಹಿತಿ ಇರಲಿಲ್ಲ ಎನ್ನಲಾಗಿದೆ.
ಆರೋಪಿಯ ಚಲನವಲನಗಳ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ತನಿಖಾ ಸಂಸ್ಥೆಗಳು ರಾಜ್ಯ ಆಂತರಿಕ ಭದ್ರತಾ ವಿಭಾಗದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿತ್ತು ಎನ್ನಲಾಗಿದೆ. ಸದ್ಯ ಕಾರ್ಯಾಚರಣೆ ನಡೆಸಿ ಮುಂಬರುವ ಮಾರ್ಚ್ ತಿಂಗಳಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ಸಿದ್ಧತೆ ನಡೆಸಿದ್ದ ಶಂಕಿತನನ್ನು ಬಂಧಿಸಲಾಗಿದೆ.
ಸದ್ಯ ತನಿಖೆ ಮುಂದುವರೆಸಿರುವ ಅಧಿಕಾರಿಗಳು ಟೆಕ್ನಿಕಲ್ ಎವಿಡೆನ್ಸ್ ಗಳನ್ನು ಕಲೆಕ್ಟ್ ಮಾಡುತ್ತಿದ್ದಾರೆ. ಶಂಕಿತ ಆರೀಫ್ ನ ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್, ಹಾರ್ಡ್ ಡಿಸ್ಕ್, ಟೆಕ್ನಿಕಲ್ ಪೇಪರ್ ದಾಖಲೆಗಳನ್ನು ಸಹ ವಶಕ್ಕೆ ಪಡೆಯಲಾಗಿದೆ.