ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.1: ಗಾಂಧಿಯವರ 154ನೇ ಜನ್ಮ ವಾರ್ಷಿಕೋತ್ಸವದ ಅಂಗವಾಗಿ ಬಿಬಿಎಂಪಿ ವ್ಯಾಪ್ತಿಯಲ್ಲಿ 1,900ಕ್ಕೂ ಹೆಚ್ಚು ಸ್ಥಳಗಳಲ್ಲಿ 2.5 ಲಕ್ಷಕ್ಕೂ ಹೆಚ್ಚು ಮಂದಿಯಿಂದ ಸ್ವಚ್ಛತಾ ಹೀ ಸೇವಾ ಶ್ರಮದಾನ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲಾಯಿತು.
‘ಸ್ವಚ್ಛ ಸರ್ವೇಕ್ಷಣ್-2023’ ಪಾಲಿಕೆ ವ್ಯಾಪ್ತಿಯಲ್ಲಿ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಸಂಸದರು, ಸ್ಥಳೀಯ ಶಾಸಕರುಗಳು, ಆಡಳಿತಗಾರರಾದ ರಾಕೇಶ್ ಸಿಂಗ್, ಮುಖ್ಯ ಆಯುಕ್ತರಾದ ತುಷಾರ್ ಗಿರಿ ನಾಥ್, ವಿಶೇಷ ಆಯುಕ್ತರಾದ ಡಾ. ಹರೀಶ್ ಕುಮಾರ್, ಎಲ್ಲಾ ವಲಯ ಜಂಟಿ ಆಯುಕ್ತರು, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರು ಸೇರಿದಂತೆ ಹಿರಿಯ ಅಧಿಕಾರಿಗಳು ಪಾಲ್ಗೊಂಡು ಸ್ವಚ್ಛತಾ ಕಾರ್ಯವನ್ನು ನಡೆಸಿದರು.
ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣಾ ವಿಭಾಗದಿಂದ ನಗರದ ಕೆರೆಗಳು, ರೈಲ್ವೆ ನಿಲ್ದಾಣ, ರಸ್ತೆ ಬದಿ, ಸೇತುವೆಯ ಕೆಳಗೆ, ಮೇಲ್ಸೇತುವೆ ಕೆಳಗೆ, ಕೊಳೆಗೇರಿ ಪ್ರದೇಶಗಳು, ಮಾರುಕಟ್ಟೆ ಸ್ಥಳಗಳು, ಆರಾಧನೆ ಸ್ಥಳಗಳು, ಉದ್ಯಾನವನಗಳು, ಬಸ್ ನಿಲ್ದಾಣಗಳು, ಪ್ರಮುಖ ಜಂಕ್ಷನ್ ಗಳು, ಶಾಲಾ-ಕಾಲೇಜುಗಳ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ಇನ್ನಿತರೆ ಸ್ಥಳಗಳಲ್ಲಿ ನಾಗರೀಕರು, ಸ್ಥಳೀಯ ಎನ್ಜಿಒಗಳು, ಎನ್ಎಸ್ಎಸ್- ಎನ್ಸಿಸಿ ವಿದ್ಯಾರ್ಥಿಗಳು, ಸ್ವಯಂ ಸೇವಕರು, ಬಿಎಸ್ಎಫ್ ಯೋಧರು, ಅಗ್ಲಿ ಇಂಡಿಯನ್ಸ್, ಸರ್ಕಾರಿ ಅಧಿಕಾರಿಗಳು, ಪೌರಕಾರ್ಮಿಕರು ಸೇರಿದಂತೆ ಇನ್ನಿತರರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ತ್ಯಾಜ್ಯವನ್ನು ತೆರವುಗೊಳಿಸಲಾಯಿತು.
20ಕ್ಕೂ ಹೆಚ್ಚು ಟನ್ ತ್ಯಾಜ್ಯ ಸಂಗ್ರಹ
ಸ್ವಚ್ಛತಾ ಅಭಿಯಾನದ ವೇಳೆ ರಸ್ತೆಗಳು, ಬೀದಿ ಮತ್ತು ಇನ್ನಿತರೆ ಸ್ಥಳಗಳು ಸೇರಿಂದಂತೆ ಅಂದಾಜು 4,000 ಕಿ.ಮೀ ಪ್ರದೇಶದಲ್ಲಿ ಸುಮಾರು 20-25 ಟನ್ಗಳಷ್ಟು ತ್ಯಾಜ್ಯವನ್ನು ಸಂಗ್ರಹಿಸಲಾಗಿದೆ. ಸಂಗ್ರಹವಾದ ತ್ಯಾಜ್ಯವನ್ನು ಒಣ ಹಾಗೂ ಹಸಿ ತ್ಯಾಜ್ಯವನ್ನು ಬೇರ್ಪಡಿಸಿ ಆಟೋ ಟಿಪ್ಪರ್ ಗಳ ಮೂಲಕ ಕಾಂಪ್ಯಾಕ್ಟರ್ ಗಳಿಗೆ ಹಾಕಿ ತ್ಯಾಜ್ಯವನ್ನು ವಿಲೇವಾರಿ ಮಾಡಲಾಯಿತು.