ಸುದ್ದಿಮೂಲ ವಾರ್ತೆ
ಬೆಂಗಳೂರು, ಮೇ 20: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಮತ್ತು 8 ಮಂದಿ ಶಾಸಕರು ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಇಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ರಾಜ್ಯದ ಲಕ್ಷಾಂತರ ಜನರ ಸಮಕ್ಷಮ ಪ್ರಮಾಣ ವಚನ ಬೋಧಿಸಿದರು. ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಿದ ಸಿದ್ದರಾಮಯ್ಯ ತಾವು ಸಹ ಆಸ್ತಿಕರು ಎಂಬುದನ್ನು ದೃಢಪಡಿಸಿದರು.
ಈ ಹಿಂದೆ 2013ರಿಂದ 2018ರ ವರೆಗೆ ಮುಖ್ಯಂಮತ್ರಿಯಾಗಿ ರಾಜ್ಯದಲ್ಲಿ ಹಲವು ಭಾಗ್ಯಗಳನ್ನು ಜಾರಿ ಮಾಡಿ ತಮ್ಮದೇ ಆದ ಛಾಪು ಮೂಡಿಸಿದ್ದ ಸಿದ್ದರಾಮಯ್ಯ, ಈ ಬಾರಿ ಚುನಾವಣೆಲ್ಲಿ ಸಹ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ರಾಜ್ಯದ ಜನರ ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗುವ ಮೂಲಕ ಇಂದು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಉಪಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ನೊಣವಿನಕೆರೆ ಗಂಗಾಧರಯ್ಯ ಅಜ್ಜರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಸಂಪುಟ ದರ್ಜೆ ಸಚಿವರಾದ ಡಾ.ಜಿ. ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಎಂ.ಬಿ. ಪಾಟೀಲ್, ಪ್ರಿಯಾಂಕ್ ಖರ್ಗೆ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಸತೀಶ್ ಜಾರಕಿಹೊಳಿ ಅವರು ಬುದ್ಧ ಬಸವ ಅಂಬೇಡ್ಕರ್ ಹೆಸರಿನಲ್ಲಿ, ರಾಮಲಿಂಗಾರೆಡ್ಡಿ ಸತ್ಯ ನಿಷ್ಠೆ ಹೆಸರಿನಲ್ಲಿ, ಜಮೀರ್ ಅಹಮದ್ ಖಾನ್ ಅವರು ಅಲ್ಲಾ ಮತ್ತು ತಾಯಿಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.
ಏಳು ಮಂದಿ ಸಚಿವರು ಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಜಮೀರ್ ಅಹಮದ್ ಖಾನ್ ಮಾತ್ರ ಇಂಗ್ಲಿಷ್ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಎಂಟು ಮಂದಿ ಸಚಿವರಿಗೆ ಪ್ರತ್ಯೇಕವಾಗಿ ಪ್ರಮಾಣ ವಚನ ಬೋಧಿಸಿದರು.
ಈ ಸಮಾರಂಭದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಅಧ್ಯಕ್ಷ ರಾಹುಲ್ಗಾಂಧಿ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ಛತ್ತೀಸ್ಘಡ ಮುಖ್ಯಮಂತ್ರಿ ಭೂಪೇಂದ್ರ ಸಿಂಗ್ ಭಗೇಲ್, ರಾಜಸ್ತಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್, ಪಾಂಡಿಚೇರಿ ಮುಖ್ಯಮಂತ್ರಿ ಎನ್. ರಂಗಸ್ವಾಮಿ, ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್, ಎನ್ಸಿಪಿ ನಾಯಕ ಶರದ್ ಪವಾರ್, ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿಗಳಾದ ಫಾರೂಕ್ ಅಬ್ದುಲ್ಲಾ, ಮಹೆಬೂಬಾ ಮುಫ್ತಿ, ಸಿಪಿಎಂನ ಸೀತಾರಾಂ ಯಚೂರಿ, ಸಿಪಿಐನ ಡಿ. ರಾಜಾ, ಕಮಲ್ ಹಾಸನ್, ರಾಷ್ಟ್ರೀಯ ಲೋಕದಳದ ಜಯಂತ್ ಚೌಧರಿ ಸಹಿತ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ಅದೇ ವೇದಿಕೆಯಲ್ಲಿ ಮಾತನಾಡಿ, ಸಿದ್ದರಾಮಯ್ಯ ಅವರು, ರಾಜ್ಯದ ಜನರು ತಮ್ಮ ಮೇಲೆ ಮತ್ತು ಕಾಂಗ್ರೆಸ್ ಪಕ್ಷದ ಮೇಲೆ ವಿಶ್ವಾಸ ಇಟ್ಟು ಬೆಂಬಲ ನೀಡಿದ್ದಕ್ಕೆ ಕೃತಜ್ಞತೆ ಸಲ್ಲಿಸಿ, ಈ ಹಿಂದೆಯೂ ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ ಎಂದು ಲಕ್ಷಾಂತರ ಜನರ ಮುಂದೆ ಘೋಷಣೆ ಮಾಡಿದರು.
ಚುನಾವಣಾ ಸಂದರ್ಭದಲ್ಲಿ ಗೃಹ ಜ್ಯೋತಿ, ಅನ್ನಭಾಗ್ಯ, ಯುವನಿಧಿ, ಗೃಹಲಕ್ಷ್ಮೀ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ನೀಡುವುದಾಗಿ ಘೋಷಿಸಿದ್ದು, ಅದನ್ನು ನಂಬಿ ಜನರು ನಮಗೆ ಆಶೀರ್ವಾದ ಮಾಡಿದ್ದೀರಿ. ಅದಕ್ಕೆ ಚ್ಯುತಿ ಬಾರದಂತೆ ನಡೆದುಕೊಳ್ಳುತ್ತೇವೆ. ಇಂದೇ ಜರಗುವ ಸಚಿವ ಸಂಪುಟದ ಮೊದಲ ಸಭೆಯಲ್ಲಿಯೇ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ಅಭಯ ನೀಡಿದರು.
ಈ ಹಿಂದೆ ನೀಡಿದ ಭರವಸೆಗಳನ್ನು 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದು, ಈಗಲೂ ನಮ್ಮ ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಭರವಸೆಗಳನ್ನು ಬರುವ ಐದು ವರ್ಷಗಳಲ್ಲಿ ಈಡೇರಿಸುವುದಾಗಿ ಅಭಯ ನೀಡಿದ ಅವರು ನುಡಿದಂತೆ ನಡೆದಿದ್ದೇವೆ, ಮುಂದೆಯೂ ನಡೆಯುತ್ತೇವೆ ಎಂದು ಪುನರುಚ್ಛರಿಸಿದರು.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರು ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.