ಸುದ್ದಿಮೂಲ ವಾರ್ತೆ
ಆನೇಕಲ್, ಅ:14: ಜನರ ತೆರಿಗೆ ಮೂಲಕ ಕಟ್ಟುವ ಹಣವೇ ಸ್ಥಳೀಯ ಸರ್ಕಾರಗಳ ಅಭಿವೃದ್ಧಿಯ ಮೂಲವಾಗಿದೆ ಎಂದು ಆನೇಕಲ್ ತಾಲ್ಲೂಕಿನ ಇಂಡ್ಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ರತ್ನಮ್ಮ ಅಶ್ವತಪ್ಪ ತಿಳಿಸಿದರು.
ಪಂಚಾಯಿತಿ ವತಿಯಿಂದ ಹಮ್ಮಿಕೊಂಡಿದ್ದ ತೆರಿಗೆ ವಸೂಲಾತಿ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇಂಡ್ಲವಾಡಿ ಗ್ರಾಮ ಪಂಚಾಯಿತಿ ಸಂಪನ್ಮೂಲವಿಲ್ಲದ ಬಡಪಂಚಾಯಿತಿಯಾಗಿದೆ. ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲು ತುಂಬಾ ತೊಂದರೆಯಾಗಿ ಸಂಪನ್ಮೂಲಕ್ಕೆ ಜನರ ಮೇಲೆ ಅವಲಂಬಿತವಾಗಬೇಕಾಗಿದೆ. ಇದನ್ನು ಅರಿತ ಪಂಚಾಯಿತಿಯು ಪ್ರತಿ ಹಳ್ಳಿಗಳಲ್ಲಿ ಜನರ ಬಳಿಗೆ ಹೋಗಿ ಕಂದಾಯವನ್ನು ವಸೂಲಾತಿ ಮಾಡಿ ಇದರಿಂದ ಆಗುವ ಪ್ರಯೋಜನಗಳನ್ನು ತಿಳಿಸಲಾಗುತ್ತಿದೆ ಎಂದು ತಿಳಿಸಿದರು.
ಇಂಡ್ಲವಾಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಆದೂರು ಪ್ರಕಾಶ್ ಮಾತನಾಡಿ, ಪಂಚಾಯಿತಿಯು ರಾಜಧಾನಿಯಿಂದ ಕೂಗಳತೆ ದೂರದಲ್ಲಿದ್ದರೂ ಕೂಡ, ಅನುದಾನದ ಕೊರತೆ ಎದುರಿಸುತ್ತಿದೆ. ಸರ್ಕಾರಗಳು ಇಂತಹ ಪಂಚಾಯತಿಯನ್ನು ಗುರುತಿಸಿ ಹೆಚ್ಚಿನ ಅನುದಾನವನ್ನು ನೀಡಿ ಸಹಕಾರವನ್ನು ನೀಡಬೇಕು. ಕೇವಲ ನೀರಿನ ತೆರಿಗೆ ಮನೆಗಳಿಗೆ ವಿಧಿಸುವ ಕಂದಾಯ ಮಾತ್ರ ಆದಾಯ ಮೂಲವಾಗಿದೆ. ಹಳ್ಳಿಗಳಲ್ಲಿ ಜನರು ತೆರಿಗೆ ಪಾವತಿಸಲು ಬರ ನಿರುದ್ಯೋಗ ಬಡತನವನ್ನು ನೆಪ ಹೇಳುತ್ತಿದ್ದಾರೆ ನೋವಿನಿಂದ ನುಡಿದರು.
ಪಂಚಾಯತಿ ಕಾರ್ಯದರ್ಶಿ ಅಂಬರೀಶ್ ಮಾತನಾಡಿ, ಗ್ರಾಮ ಪಂಚಾಯಿತಿ ಬಹುತೇಕ ಕಾಡಂಚಿನ ಗ್ರಾಮಗಳಾಗಿದ್ದು ಯಾವುದೇ ಮೂಲವಿಲ್ಲದೆ ಸೊರಗಿದೆ. ಇಂತಹ ಪಂಚಾಯತಿಗೆ ಜನರ ತೆರಿಗೆ ಬಹಳ ಮುಖ್ಯವಾಗಿದೆ ಇದನ್ನು ಅರಿತುಕೊಂಡು ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ತೆರಿಗೆಯನ್ನು ಕಟ್ಟಬೇಕು ಎಂದು ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ಮಾಜಿ ಉಪಾಧ್ಯಕ್ಷರಾದ ಎಲ್ ವಿ ಬಿ ವೆಂಕಟೇಶ್, ಪಂಚಾಯತಿ ಸದಸ್ಯರುಗಳಾದ ಪದ್ಮಮ್ಮ, ಮುತ್ತರಾಯಪ್ಪ, ನಾಗಮ್ಮ, ರಘು, ಕರ ವಸೂಲಿಗಾರರಾದ ಶ್ರೀನಿವಾಸ್, ಶಿವು, ವ್ಯಾಪಾರಿ ನಾರಾಯಣ, ಕಂಪ್ಯೂಟರ್ ಆಪರೇಟರ್ ಅಂಬರೀಶ್, ವಾಟರ್ ಮ್ಯಾನ್ ಗಳಾದ ಶಿವಣ್ಣ, ಲಿಂಗರಾಜು, ಗಣೇಶ್ ಸತೀಶ್, ಮಾದೇಶ್, ಮಾದಯ್ಯ, ಶಿವನಾಯಕ, ಮುನಿರಾಜು, ಕೇಶವ, ಅಶೋಕ್, ಸೋಮಶೇಖರ್, ಮುನಿರಾಜು, ವೆಂಕಟೇಶ್, ಕೋಮಲ, ಎಲ್ಲಮ್ಮ, ಮಂಜುಳಾ, ಸರಸ್ವತಮ್ಮ, ಭಾಗ್ಯಮ್ಮ, ಚೌಡಮ್ಮ ಇತರರು ಇದ್ದರು.