ಸುದ್ದಿಮೂಲ ವಾರ್ತೆ
ಜೂ.16:ಕಾಲಕ್ಕೆ ತಕ್ಕಂತೆ ಶಿಕ್ಷಕರು ವೃತ್ತಿಪರತೆ ವೃದ್ಧಿಸಿಕೊಳ್ಳುವ ಅನಿವಾರ್ಯತೆ ತುಂಬಾ ಜರೂರಿದೆ. ಜ್ಞಾನ ಯಾವ ದಿಕ್ಕಿನಿಂದಲೂ ಬರಲಿ ಅದನ್ನು ತನ್ನದಾಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳ ಸರ್ವಾಂಗಣ ವಿಕಾಸದಲ್ಲಿ ಸಕ್ರಿಯ ಪಾತ್ರವನ್ನು ವಹಿಸಿಕೊಳ್ಳಬೇಕಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಂದ್ರ ಕಾಂಬಳೆ ಅವರು ಹೇಳಿದರು.
ಪಟ್ಟಣದ ವಿದ್ಯಾನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಾಲೆಯಲ್ಲಿ ಅಜೀಮ್ ಪ್ರೇಮ್’ಜಿ ಫೌಂಡೇಶನ್ ವತಿಯಿಂದ ತೆರೆಯಲಾದ ಶಿಕ್ಷಕರ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿ, ಶಿಕ್ಷಕರು ತಮ್ಮ ಶಾಲಾವಧಿಯ ನಂತರ ಜ್ಞಾನವನ್ನು ವೃದ್ಧಿಸಿಕೊಂಡು ಕೌಶಲ್ಯಭರಿತರಾಗಿ ಮಕ್ಕಳಿಗೆ ಜ್ಞಾನ ವರ್ಗಾಯಿಸಲು ಅನುಕೂಲವಾಗಲು ಅಜೀಮ್ ಪ್ರೇಮ್’ಜಿ ಫೌಂಡೇಶನ್ ಆಸಕ್ತಿವಹಿಸಿ ಇಲ್ಲಿ ಕಲಿಕಾ ಕೇಂದ್ರವನ್ನು ಆರಂಭಿಸಿದೆ. ತಾಲೂಕಿನ ಶಿಕ್ಷಕರು ಇದರ ಸದುಪಯೋಗಪಡೆದುಕೊಳ್ಳಬೇಕು ಎಂದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಮಲ್ಲಪ್ಪ ಕುದುರಿ ಮಾತನಾಡಿ, ಶಿಕ್ಷಕರು ಸಮಯ ಪಾಲನೆ ಜತೆಗೆ ವೃತ್ತಿಪರತೆ ರೂಢಿಸಿಕೊಂಡರೆ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಅಡಗಿರುವ ಪ್ರತಿಭೆಯನ್ನು ಅನಾವರಣಗೊಳಿಸಬಹುದು ಎಂದರು.
ಕ್ಷೇತ್ರ ಸಮನ್ವಯಾಧಿಕಾರಿ ಜಗದೀಶಪ್ಪ ,ಅಜೀಂ ಪ್ರೇಮ್’ಜಿ ಫೌಂಡೇಶನ್ ಜಿಲ್ಲಾ ಸಂಚಾಲಕ ಹಾಲೇಶ್ ಬಿ., ಬಿ.ಆರ್.ಪಿ ಶಾರದ ಅಣ್ಣಿಗೆರಿ, ಸಿ.ಆರ್.ಪಿ ಸೋಮಲಿಂಗಪ್ಪ ಗುರಿಕಾರ, ಶಾಲಾ ಮುಖ್ಯೋಪಾಧ್ಯಾಯರಾದ ಮರಿಯವ್ವ ಎಚ್. ಇನ್ನಿತರರು ಮಾತನಾಡಿದರು. ಈ ವೇಳೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸದಸ್ಯರಾದ ಅಲ್ತಾಫ್ ಹುಸೇನ್ ಮುಜಾವರ್ ಮುರ್ತುಜಾಬಿ ವಿಚಾರ ಸಂಕೀರ್ಣದಲ್ಲಿ ಭಾಗವಹಿಸಿ ತಮ್ಮ ವಿಚಾರ ಮಂಡಿಸಿದರು.