ಸುದ್ದಿಮೂಲ ವಾರ್ತೆ
ಬಾಗೇಪಲ್ಲಿ,ನ.7: ಚೇಳೂರು ತಾಲ್ಲೂಕಿನಾದ್ಯಂತ ದೀಪಾವಳಿಯು ಬೆಳಕಿನ ಹಬ್ಬವಾಗಿದ್ದು, ಪರಿಸರ ಸ್ನೇಹಿಯಾಗಿ ಸರಳ ರೀತಿಯಲ್ಲಿ ಮಾಲಿನ್ಯ ರಹಿತವಾಗಿ ಆಚರಿಸಬೇಕು ಎಂದು ತಾಲೂಕ್ ತಹಶೀಲ್ದಾರ್ ಪ್ರಶಾಂತ್ ಕೆ ಪಾಟೀಲ್ ತಿಳಿಸಿದ್ದಾರೆ.
ಕಳೆದ ತಿಂಗಳ ಹಿಂದೆ ನಡೆದ ಆನೇಕಲ್ ಪಟಾಕಿ ಗೋದಾಮು ದುರಂತದ ನಂತರ ಸರ್ಕಾರ ಎಚ್ಚೆತ್ತು ಕೊಂಡಿದ್ದು, ನೂಕ್ಲಿಯರ್ ಕೆಮಿಕಲ್ ಮಿಶ್ರಿತ ಪಟಾಕಿಗಳಿಂದ ಸಾರ್ವಜನಿಕರ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದು. ಇದರಂತೆ ಸರ್ಕಾರ ಕೆಮಿಕಲ್ ಮಿಶ್ರಿತ ಪಟಾಕಿಗಳನ್ನು ರದ್ದು ಮಾಡಿ, ಹಸಿರು ಪಟಾಕಿಗಳಿಗೆ ಅನುಮತಿ ಕೊಟ್ಟಿರುತ್ತದೆ. ಸರ್ಕಾರ ಹಾಗು ಉಚ್ಚ ನ್ಯಾಯಾಲಯದ ಆದೇಶದಂತೆ ತಾಲೂಕಿನಲ್ಲಿ ಯಾವುದೇ ಕೆಮಿಕಲ್ ಮಿಶ್ರಿತ ಪಟಾಕಿಗಳ ಮಾರಾಟ ಮತ್ತು ದಸ್ತಾನು ಮಾಡಲಿಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದ್ದಾರೆ.
ಈಗಾಗಲೇ ಚೇಳೂರು ಮತ್ತು ಬಾಗೇಪಲ್ಲಿ ಹಸಿರು ಪಟಾಕಿಗಳ ಮಾರಾಟಕ್ಕೆ ಹಾಗು ದಾಸ್ತಾನು ಮಾಡಲಿಕ್ಕೆ ತಾತ್ಕಾಲಿಕ ಪರವಾನಗಿ ಪಡೆಯಲು ಅಂಗಡಿ ಮಾಲೀಕರಿಂದ ಮನವಿ ಸ್ವೀಕರಿಸಿದ್ದು, ಹದಿನಾರು ಜನ ಅರ್ಜಿ ಸಲ್ಲಿಸಿರುತ್ತಾರೆ. ಇದರ ಪೈಕಿ ಬಾಗೇಪಲ್ಲಿ ಹದಿನೈದು, ಚೇಳೂರಿನಿಂದ ಒಂದು ಅರ್ಜಿ ಪಡೆಯಲಾಗಿದೆ. ಇದನ್ನು ಜಿಲ್ಲಾಧಿಕಾರಿಗಳ ಅನುಮತಿಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ನ. 10 ರಿಂದ 15 ರವರೆಗೆ ಮಾರಾಟ ಮಾಡಲು ಅವಕಾಶ ನೀಡಿದ್ದು, ಹಸಿರು ಪಟಾಕಿಗಳನ್ನೇ ಮಾರಾಟ ಮಾಡಬಹುದು. ಹಸಿರು ಪಟಾಕಿಗಳನ್ನು ಬಿಟ್ಟು ಕೆಮಿಕಲ್ ಮಿಶ್ರಿತ ಪಟಾಕಿ ಮಾರಾಟ ಹಾಗು ದಸ್ತಾನು ಮಾಡಿರುವುದು ಕಂಡುಬಂದಲ್ಲಿ ಅಂತಹ ವ್ಯಕ್ತಿಗಳ ವಿರುದ್ಧ ಸರ್ಕಾರ ನಿಯಮನ್ವಯ ಜಿಲ್ಲಾಧಿಕಾರಿಗಳ ಆದೇಶದಂತೆ ಕ್ರಿಮಿನಲ್ ಮೊಕದ್ದಮೆ ಹಾಕಲಾಗುವುದು ಎಂದು ಪಟಾಕಿ ವ್ಯಾಪಾರಸ್ಥರಿಗೆ ಎಚ್ಚರಿಕೆ ನೀಡಿದರು.