ಬೆಂಗಳೂರು: ಕಳೆದ ನಾಲ್ಕೈದು ದಿನಗಳಿಂದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು, ಕಾಂಗ್ರೆಸ್ಸಿನ ಹಲವಾರು ಸಚಿವರು ಮತ್ತು ಕಾಂಗ್ರೆಸ್ ಪಕ್ಷವು ರಾಜ್ಯದ ಜನರ ಎದುರು ನಿರಂತರ ಸುಳ್ಳುಗಳನ್ನು ಹೇಳಿ ಜನತೆಯ ದಾರಿ ತಪ್ಪಿಸುವ ದೊಡ್ಡ ಪ್ರಯತ್ನ ಮಾಡುತ್ತಿದ್ದಾರೆÉ ಎಂದು ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಅವರು ಆಕ್ಷೇಪಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಡ ಜನತೆಗೆ ರಾಜ್ಯ ಕಾಂಗ್ರೆಸ್ ಸರಕಾರವು ಅನ್ನ ಭಾಗ್ಯ ಯೋಜನೆಯಡಿ ಕೊಡಬೇಕೆಂದು ಹೊರಟ ಅಕ್ಕಿಯನ್ನು ದುರುದ್ದೇಶಪೂರ್ವಕ ನೀತಿ ನಿಯಮಗಳನ್ನು ಬದಲಿಸಿ ರಾಜ್ಯ ಸರಕಾರಕ್ಕೆ ಅಕ್ಕಿ ಕೊಡುವುದನ್ನು ಕೇಂದ್ರದ ನರೇಂದ್ರ ಮೋದಿಯವರ ಸರಕಾರವು ನಿಲ್ಲಿಸಿದೆ ಎಂಬ ಆರೋಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಹೆಚ್ಚುವರಿ 5 ಕೆಜಿ ಅಕ್ಕಿ ಕೊಡಲು ನಾವು ಎಫ್ಸಿಐಗೆ- ಕೇಂದ್ರಕ್ಕೆ ಮನವಿ ಮಾಡಿದ್ದೆವು. ತಕ್ಷಣದಲ್ಲಿ ಕರ್ನಾಟಕದ ಫುಡ್ ಕಾರ್ಪೊರೇಷನ್ ಪ್ರಾದೇಶಿಕ ಕಚೇರಿಯವರು ನಮಗೆ ಅನುಮತಿ ಇದೆ ಎಂದು ಪತ್ರ ಬರೆದರು. ನಂತರ ಕೇಂದ್ರವು ಸಭೆ ನಡೆಸಿ ನಿಯಮ ಬದಲಿಸಿ ಹೆಚ್ಚುವರಿ ಅಕ್ಕಿ ನೀಡುವುದಿಲ್ಲ ಎಂದಿದ್ದಾರೆ. ಇದರ ಹಿಂದೆ ರಾಜ್ಯದಲ್ಲಿ ಅನ್ನ ಭಾಗ್ಯ ಅಕ್ಕಿ ವಿತರಣೆ ತಡೆಯುವ ದುರುದ್ದೇಶ ಇದೆ ಎಂದು ಆರೋಪಿಸಲಾಗುತ್ತಿದೆ. ಖಾಸಗಿ ಖರೀದಿಗೆ ಅವಕಾಶ ಮತ್ತು ರಾಜ್ಯ ಸರಕಾರದಿಂದ ಖರೀದಿಗೆ ತಡೆ ಒಡ್ಡಿದ್ದಾಗಿ ಇನ್ನೊಂದು ಆರೋಪ ಮಾಡಿದ್ದಾರೆ ಎಂದರು.
ಇವತ್ತು ಮಾಧ್ಯಮಗಳಲ್ಲಿ ಬಿತ್ತರಗೊಂಡ ವರದಿ ಪ್ರಕಾರ ಜೂನ್ 8ರಂದು ಅಂದರೆ, ರಾಜ್ಯ ಸರಕಾರವು ಎಫ್ಸಿಐ ಪ್ರಾದೇಶಿಕ ಕಚೇರಿಗೆ ಹೆಚ್ಚುವರಿ 5 ಕೆಜಿ ಅಕ್ಕಿ ಕೊಡಬೇಕೆಂದು ಮನವಿ ಮಾಡುವುದಕ್ಕಿಂತ ಮುಂಚಿತವಾಗಿಯೇ ದೆಹಲಿಯಲ್ಲಿ ಸಚಿವಾಲಯಗಳ ಆಂತರಿಕ ವಿಶೇóಷ ಸಭೆಯು (ಸ್ಪೆಷಲ್ ಇಂಟರ್ ಮಿನಿಸ್ಟೀರಿಯಲ್ ಮೀಟಿಂಗ್) ನಡೆದಿತ್ತು. ಅಕ್ಕಿ ಪಡೆಯಲು ಅವಕಾಶ ಇದೆ ಎಂದು ಎಫ್ಸಿಐ ಪ್ರಾದೇಶಿಕ ಅಧಿಕಾರಿ ಪತ್ರ ಬರೆಯುವುದಕ್ಕಿಂತ ಕೆಲದಿನಗಳ ಹಿಂದೆಯೇ ನಡೆದ ಸಭೆ ಇದಾಗಿತ್ತು. ಈ ಸಭೆಯಲ್ಲಿ ದೇಶದಲ್ಲಿ ಕಳೆದ 2-3 ತಿಂಗಳಿನಿಂದ ಅಕ್ಕಿ ಮತ್ತು ಗೋಧಿ ಬೆಲೆ ಹೆಚ್ಚಳವಾಗುವ ವಿಷಯ ಚರ್ಚೆಗೆ ಒಳಪಟ್ಟಿತು. ಮಂಡಿಗಳಲ್ಲಿ ಗೋಧಿಯ ಬೆಲೆ ಶೇ 8ರಷ್ಟು ಹೆಚ್ಚಳ ಆದುದು ಬೆಳಕಿಗೆ ಬಂದಿದೆ. ದೇಶದ ಬಡವರು, ಮಧ್ಯಮ ವರ್ಗದವರ ಹಿತಾಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು ಖಾಸಗಿ ವ್ಯಾಪಾರಿಗಳು, ಹೋಲ್ಸೇಲ್ ಟ್ರೇಡರ್ಗಳು, ಸ್ಟಾಕಿಸ್ಟ್ಗಳು ಎಷ್ಟು ಗೋಧಿ, ಅಕ್ಕಿಯನ್ನು ದಾಸ್ತಾನು ಇಡಬಹುದು ಎಂದು ಮಿತಿ ಹೇರುವ ಕುರಿತು ಚರ್ಚಿಸಲಾಗಿತ್ತು ಎಂದು ತಿಳಿಸಿದರು.
ಮಾರುಕಟ್ಟೆಯಲ್ಲಿ ಉತ್ಪನ್ನಗಳ ಸರಬರಾಜು ಜಾಸ್ತಿ ಇರಬೇಕು; ಬೆಲೆ ಏರಿಕೆ ಆಗದಂತೆ ಕ್ರಮ ತೆಗೆದುಕೊಳ್ಳಬೇಕೆಂದು ಜೂನ್ 8ರಂದು ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅದೇ ಸಭೆಯಲ್ಲಿ ಮೇ 2ರಂದು ಕೇಂದ್ರ ಸರಕಾರದ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ಬೆಲೆ ಏರಿಕೆ ಆಗದಂತೆ ತಡೆಯುವ ಕುರಿತು ಚರ್ಚಿಸಿದ್ದ ಕುರಿತಂತೆ ‘ಮಿನಿಟ್ಸ್ ಆಫ್ ಮೀಟಿಂಗ್’ನಲ್ಲಿ ಉಲ್ಲೇಖವಾಗಿದೆ ಎಂದು ವಿವರಿಸಿದರು.
ಕರ್ನಾಟಕದಲ್ಲಿ ಚುನಾವಣೆ ನಡೆಯುವುದಕ್ಕಿಂತ ಮೊದಲೇ ಮೇ 2ರಂದು ಕೇಂದ್ರ ಕ್ಯಾಬಿನೆಟ್ ಕಾರ್ಯದರ್ಶಿ ನೇತೃತ್ವದ ಸಭೆಯಲ್ಲಿ ದೇಶದಲ್ಲಿ ಬೆಲೆಏರಿಕೆ ನಿಯಂತ್ರಿಸಲು ‘ಓಪನ್ ಮಾರ್ಕೆಟ್ ಸೇಲ್ಸ್ ಸ್ಕೀಂ’ ಕುರಿತು ಪರಿಶೀಲಿಸಲು ಸೂಚಿಸಲಾಗಿತ್ತು. ಕಾಂಗ್ರೆಸ್ ಸರಕಾರದ ಯೋಜನೆಯನ್ನು ಫ್ಲಾಪ್ ಮಾಡಲು ತಂದ ತಿದ್ದುಪಡಿ ಇದಲ್ಲ. ಬೆಲೆ ಏರಿಕೆ ನಿಯಂತ್ರಿಸುವ ದೂರದೃಷ್ಟಿಯ ಚಿಂತನೆಯಿಂದ ಮೋದಿ ಅವರ ಸರಕಾರ ಈ ತಿದ್ದುಪಡಿ ತರಲು ಮುಂದಾಗಿತ್ತು ಎಂದರಲ್ಲದೆ, ಮೋದಿಯವರು ಮತ್ತು ಬಿಜೆಪಿಯವರಿಗೆ ಮೇ 2ರಂದೇ ಕನಸು ಬಿದ್ದಿತ್ತು; ಅನ್ನ ಭಾಗ್ಯ ತಡೆಯುವ ದೃಷ್ಟಿಯಿಂದ ಒಂದೂವರೆ ತಿಂಗಳ ಮೊದಲೇ ತಿದ್ದುಪಡಿ ತಂದಿದ್ದೇವೆ ಎಂಬಂತೆ ಕಾಂಗ್ರೆಸ್ ಮುಖ್ಯಮಂತ್ರಿಗಳು ಮಾತನಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.
ಈ ದಾಖಲೆಗಳು ಕಾಂಗ್ರೆಸ್ ಪಕ್ಷದ ಸುಳ್ಳನ್ನು ಸ್ಪಷ್ಟವಾಗಿ ಅನಾವರಣಗೊಳಿಸುತ್ತವೆ. ಮೋದಿ ಸರಕಾರ ಈಗಾಗಲೇ ಕರ್ನಾಟಕಕ್ಕೆ 5 ಕೆಜಿ ಅಕ್ಕಿ ಕೊಡುತ್ತಿದೆ. ಉಳಿದ 5 ಕೆಜಿ ಅಕ್ಕಿಯನ್ನು ಸಬ್ಸಿಡಿ ದರದಲ್ಲಿ ಕೇಂದ್ರದಿಂದ ಪಡೆದು ಮೋದಿಯವರ ಭಂಡಾರದಿಂದ ತಂದ 10 ಕೆಜಿ ಅಕ್ಕಿಯನ್ನೇ ಸಿದ್ದರಾಮಯ್ಯನವರ ಫೋಟೊ ಹಾಕಿ ಜನಕ್ಕೆ ಅನ್ನ ಭಾಗ್ಯದಡಿ ಕೊಟ್ಟೇವು ಎಂಬ ಯೋಜನೆ ಇತ್ತು. ಅದು ಈಡೇರದ ಕಾರಣಕ್ಕೆ ಮೋದಿ ಸರಕಾರದ ವಿರುದ್ಧ ಆರೋಪಿಸುವ ಷಡ್ಯಂತ್ರ ನಡೆದಿದೆ ಎಂದು ಟೀಕಿಸಿದರು.
ನೀವೇನಾದರೂ ಮೇ 2ರಂದು ತಾವು ಎಫ್ಸಿಐಗೆ ಪತ್ರ ಬರೆದಿದ್ದೀರಾ? ಎಂದು ಕಾಂಗ್ರೆಸ್ಸಿನವರು, ಮುಖ್ಯಮಂತ್ರಿಗಳನ್ನು ತೇಜಸ್ವಿ ಸೂರ್ಯ ಅವರು ಪ್ರಶ್ನಿಸಿದರು. ನೀವು ಜೂನ್ 10ರಂದು ಪತ್ರ ಬರೆದಿದ್ದೀರಿ. ಇಲ್ಲಿನ ಎಫ್ಸಿಐ ಅಧಿಕಾರಿಗಳು ಉನ್ನತ ಮಟ್ಟದಲ್ಲಿ ಆಗಿರುವ ಬದಲಾವಣೆ ಕುರಿತು ತಿಳಿಯದೆ ನಿಮಗೆ ಅನುಮತಿ ಕೊಟ್ಟಿದ್ದು ಜೂನ್ 13ರಂದು. ನಾವು ಅಕ್ಕಿ ಕೇಳಿದ ಮೇಲೆಯೇ ದುರುದ್ದೇಶದಿಂದ ಮೋದಿ ಸರಕಾರವು ನಿಯಮದಲ್ಲಿ ಬದಲಾವಣೆ ಮಾಡಿದೆ ಎಂದು ನೀವು ಯಾವ ಅಧಾರದಲ್ಲಿ ಆರೋಪ ಮಾಡುತ್ತಿದ್ದೀರಿ? ಇದಕ್ಕೆ ಉತ್ತರಿಸಿ ಎಂದು ಆಗ್ರಹಿಸಿದರು. ಇದಕ್ಕೆ ಉತ್ತರ ನೀಡದೆ ಇದ್ದರೆ ಸುಳ್ಳು ಹೇಳಿದ್ದಕ್ಕಾಗಿ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯ ಮಾಡಿದರು.
ಕೋವಿಡ್ ಬಂದ ಬಳಿಕ ಕಳೆದ 3 ವರ್ಷಗಳಿಂದ ದೇಶದ 80 ಕೋಟಿ ಜನರಿಗೆ ಮೋದಿ ಸರಕಾರವು 5 ಕೆಜಿ ಅಕ್ಕಿ ನೀಡಿದೆ. ದೇಶದ 60 ಕೋಟಿ ಜನರು ಮುಕ್ತ ಮಾರುಕಟ್ಟೆ (ಅಂಗಡಿ) ಮೂಲಕ ಖರೀದಿಸಬೇಕಾಗಿದೆ. ರಾಜ್ಯದಲ್ಲೂ ಕೂಡ ಸುಮಾರು 3.5 ಕೋಟಿ ಜನರು ಉಚಿತ ಅಕ್ಕಿ ಪಡೆದರೆ, ಸುಮಾರು 2.5 ಕೋಟಿ ಜನರು ಅಂಗಡಿಗಳಿಂದ ಅಕ್ಕಿ ಖರೀದಿಸುತ್ತಾರೆ. 80 ಕೋಟಿ ಬಡವರು- ಮಧ್ಯಮ ವರ್ಗದವರಿಗೆ ಉಚಿತ ಆಹಾರ ಕೊಡುವ ಜೊತೆಗೆ, ನೇರವಾಗಿ ಅಂಗಡಿಗಳಿಂದ ಖರೀದಿಸುವವರು ಮೇಲೆ ಕೂಡ ಬೆಲೆ ಏರಿಕೆಯ ಬರೆ ಬೀಳದಂತೆ ತಡೆಯುವ ಕರ್ತವ್ಯವನ್ನು ಕೇಂದ್ರವು ನಿರ್ವಹಿಸುತ್ತಿದೆ ಎಂದು ವಿವರಿಸಿದರು.
ದೇಶದ 140 ಕೋಟಿ ಜನರ ಹಿತಾಸಕ್ತಿ ಕಾಪಾಡುವ ಕಾರ್ಯವನ್ನು ಕೇಂದ್ರದ ಬಿಜೆಪಿ ಸರಕಾರ ಮಾಡುತ್ತಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಹಣದುಬ್ಬರವು ಡಬಲ್ ಡಿಜಿಟ್ನಲ್ಲಿದ್ದರೆ ಭಾರತದಲ್ಲಿ ಅತ್ಯಂತ ಕಡಿಮೆ ಬೆಲೆ ಏರಿಕೆ ಇದೆ. ಅಮೆರಿಕದಲ್ಲಿ 40 ವರ್ಷಗಳಲ್ಲಿ ಅತಿ ಹೆಚ್ಚು ಹಣದುಬ್ಬರ ಇದೆ. ಪಕ್ಕದ ಪಾಕಿಸ್ತಾನ, ಶ್ರೀಲಂಕಾದಲ್ಲಿ ತ್ರಿಬಲ್ ಡಿಜಿಟ್ ಹಣದುಬ್ಬರ ಇದೆ. 139 ಶೇ. ಬೆಲೆ ಏರಿಕೆ ಶ್ರೀಲಂಕಾದಲ್ಲಿ ಆಗಿದೆ. ಉಕ್ರೇನ್- ರಷ್ಯಾ ಯುದ್ಧದ ನಂತರ ಉದ್ದು, ತೊಗರಿ ಬೇಳೆ, ಸನ್ ಫ್ಲವರ್ ಎಣ್ಣೆ, ಕಡ್ಲೆ ಎಣ್ಣೆ,- ಈ ಎಲ್ಲ ಪದಾರ್ಥಗಳ ಬೆಲೆ ಬೇರೆ ದೇಶಗಳಲ್ಲಿ ಹೆಚ್ಚಾಗಿತ್ತು. ಆದರೆ, ಕೇಂದ್ರವು ನಮ್ಮಲ್ಲಿ ಇವುಗಳ ಬೆಲೆ ಏರದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸಚಿವರಾದ ಕೆ.ಎಚ್.ಮುನಿಯಪ್ಪ ಅವರೂ ಅಕ್ಕಿ ವಿಷಯದಲ್ಲಿ ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಅವರು ಟೀಕಿಸಿದರು. ಕಾಳಸಂತೆ, ಹೆಚ್ಚುವರಿ ಅನಗತ್ಯ ದಾಸ್ತಾನು ತಡೆದು ಬೆಲೆ ಏರದಂತೆ ತಡೆಯಲು ಕೇಂದ್ರವು ಕ್ರಮ ಕೈಗೊಂಡಿದೆ. ಇದರ ಕುರಿತು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಕಾಂಗ್ರೆಸ್ ಪಕ್ಷದ ಪರಿಸ್ಥಿತಿ ‘ಕುಣಿಯಲಾಗದವರು ನೆಲ ಡೊಂಕು ಎಂದರು’ ಎಂಬಂತಾಗಿದೆ. ಕಾಂಗ್ರೆಸ್ಸಿಗರು ತಾವು ಕೊಟ್ಟ ಗ್ಯಾರಂಟಿಗಳನ್ನು ಅನುಷ್ಠಾನಕ್ಕೆ ತರಲು ಆಗದ ಕಾರಣ ಮೋದಿ ಸರಕಾರದ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ನುಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಎನ್.ರವಿಕುಮಾರ್, ಸಂಸದ ಪಿ.ಸಿ. ಮೋಹನ್ ಪತ್ರಿಕಾಗೋಷ್ಠಿಯಲ್ಲಿ ಇದ್ದರು.