ಸುದ್ದಿಮೂಲ ವಾರ್ತೆ,
ಮೈಸೂರು, ಮೇ 29: ವಿಧಿಯಾಟ ಅನ್ನುವುದು ಇದನ್ನೇ… ಮುಂಜಾನೆದ್ದು ಮಲೆಮಹದೇಶ್ವರ ಸ್ವಾಮಿಯ ದರ್ಶನ ಪಡೆದು, ನಮ್ಮ ಬಾಳಿಗೆ ಬೆಳಕು ನೀಡು ಎಂದು ಕೇಳಿಕೊಂಡರು. ಆದರೆ ಅವರು ತಮ್ಮೂರಿಗೆ ಹೋಗುವಾಗ ಹೋಗಿದ್ದು ಇನ್ನೆಂದೂ ಬಾರದ ಲೋಕಕ್ಕೆ.
ಮೈಸೂರು ಜಿಲ್ಲೆಯ ಟಿ.ನರಸೀಪುರ-ಕೊಳ್ಳೆಗಾಲ ರಸ್ತೆಯ ಕುರುಬೂರು ಗ್ರಾಮದ ಬಳಿ ಇರುವ ಅಡ್ಡಹಳ್ಳ ಸಮೀಪ ಇರುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಖಾಸಗಿ ಬಸ್ ಮತ್ತು ಇನೋವ ಕಾರಿನ ನಡುವೆ ಸೋಮವಾರ ಸಂಭವಿಸಿದ ರಣ ಭೀಕರ ಅಪಘಾತದಲ್ಲಿ 10 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನೂ 4 ವರ್ಷದ ಮಗು ಮತ್ತು ಇಬ್ಬರು ಗಂಡಸರು ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ.
#ಅಪಘಾತದಲ್ಲಿ ಮೃತರಾದ ಕಾರಿನಲ್ಲಿದ್ದ ಬಳ್ಳಾರಿ ಮೂಲದವರು ಮಹದೇಶ್ವರಬೆಟ್ಟದಲ್ಲಿ ಸೆಲ್ಫಿ ತೆಗೆದುಕೊಂಡಿದ್ದರು.
ಮೃತಪಟ್ವವರನ್ನು ಮಂಜುನಾಥ್ (35), ಪೂರ್ಣಿಮಾ(30), ಪವನ್ (10), ಕಾರ್ತಿಕ್ (8), ಸಂದೀಪ್ (24), ಸುಜಾತ (40), ಕೊಟ್ರೇಶ್ (45), ಗಾಯಿತ್ರಿ (35), ಶ್ರವಣ್ (3) ಹಾಗೂ ಚಾಲಕ ಆದಿತ್ಯ (42) ಎಂದು ಗುರುತಿಸಲಾಗಿದೆ. ಜನಾರ್ಧನ (40), ಪುನೀತ್ (5),ಶಶಿಕುಮಾರ್ (20) ಎಂಬ ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಎಷ್ಟರ ಮಟ್ಟಿಗೆ ಅಪಘಾತ ಸಂಭವಿಸದೆ ಎಂದರೆ 10 ಮಂದಿ ದೇಹಗಳು ಗುರುತು ಸಿಗಲಾರದ ಮಟ್ಟಿಗೆ ಛಿದ್ರಗೊಂಡಿವೆ. ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ. ಕಾರನ್ನು ಕಟ್ ಮಾಡಿ ದೇಹಗಳನ್ನು ಹೊರತೆಗೆಯಲಾಗಿದೆ. ಸ್ಥಳೀಯರ ಸಹಾಯದಿಂದ ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವಂತೆ ಮಧ್ಯಾಹ್ನ 2.14 ರಲ್ಲಿ ಈ ದುರ್ಘಟನೆ ನಡೆದಿದೆ. ಮೈಸೂರು ಕಡೆಯಿಂದ ಚಾಮರಾಜನಗರಕ್ಕೆ ಎಸ್ಎಂಆರ್ ಖಾಸಗಿ ಬಸ್ ಹೋಗುತ್ತಿತ್ತು. ಇದೇ ವೇಳೆ ಮಹದೇಶ್ವರಬೆಟ್ಟದಿಂದ ಮೈಸೂರು ಕಡೆಗೆ ಕಾರು ಬರುತ್ತಿತ್ತು. ಎರಡೂ ವಾಹನಗಳು ತಿರುವುನಲ್ಲಿ ರಭಸವಾಗಿ ಬಂದ ಕಾರಣ ಭೀಕರ ಅಪಘಾತ ನಡೆದಿದೆ.
ಬೆಂಗಳೂರಿನಿಂದಲೇ ಇನೋವ ಕಾರನ್ನು ಬಾಡಿಗೆ ಪಡೆದುಕೊಂಡು 13 ಮಂದಿ ಮಹದೇಶ್ವರ ಬೆಟ್ಟಕ್ಕೆ ಹೋಗಿ ಅಲ್ಲಿಯೇ ಉಪಹಾರ ಮಾಡಿ, ನಂತರ ಟಿ.ನರಸೀಪುರ ಸಮೀಪ ಇರುವ ತಲಕಾಡಿನ ಶ್ರೀ ಪಂಚಲಿಂಗೇಶ್ವರ ದರ್ಶನ ಮಾಡಿಕೊಂಡು ಊರಿಗೆ ಹೋಗುವ ಯೋಜನೆ ಇತ್ತು. ತಲಕಾಡಿಗೆ ಬರುವ ಮಾರ್ಗಮಧ್ಯದಲ್ಲಿ ಕಾರಿನಲ್ಲಿ ಇದ್ದ ಹತ್ತು ಮಂದಿಯ ಪ್ರಾಣಪಕ್ಷಿ ಹಾರಿಹೋಗಿದೆ. ಉಳಿದಿರುವ ಮೂವರು ಬದುಕುಳಿದರೆ ಅದು ಪವಾಡವೇ ಎಂದು ಹೇಳಲಾಗುತ್ತಿದೆ.
ಇದೇ ಮೊದಲಲ್ಲ
ಕುರುಬುರು ಅಡ್ಡಹಳ್ಳ ಸಮೀಪ ಅಪಘಾತಗಳು ಸಂಭವಿಸುತ್ತಿರುವುದು ಇದೇ ಮೊದಲಲ್ಲ. ಪ್ರತಿ ತಿಂಗಳು ಇಲ್ಲಿ
ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆ ರಸ್ತೆ ತಿರುವು ಅವೈಜ್ಞಾನಿಕವಾಗಿರುವುದು ಮತ್ತು ತಿರುವಿನಲ್ಲಿ ಗಿಡಗಂಟೆಗಳು ಬೃಹತಾಕಾರವಾಗಿ ಬೆಳೆದುಕೊಂಡಿದೆ. ಇದರಿಂದ ಎದುರಿನಿಂದ ಬರುವ ವಾಹನಗಳು ಕಾಣಿಸುವುದಿಲ್ಲ.
ಅಪಘಾತಕ್ಕೀಡಾದ ಇನೋವಾ ಕಾರಿನ ಚಾಲಕನಿಗೆ ಈ ರಸ್ತೆ ಹೊಸತು ಮತ್ತು ಖಾಸಗಿ ಬಸ್ಗಳು ಎಗ್ಗಿಲ್ಲದೆ
ರಭಸವಾಗಿ ಓಡಿಸುತ್ತಾರೆ. ಈ ಹಿನ್ನೆಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ ಎಂಧು ಸ್ಥಳೀಯರು ಹೇಳುತ್ತಾರೆ.
ಟೋಲ್ ಮಾತ್ರ ವಸೂಲಿ, ರಿಪೇರಿ ಮಾತ್ರ ಇಲ್ಲ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಮಾಲೀಕರಿಂದ ಬಿಡದೇ ಟೋಲ್ ಹಣ ವಸೂಲಿ ಮಾಡಲಾಗುತ್ತದೆ. ಆದರೆ ರಸ್ತೆ ದುರಸ್ತಿ ಮಾತ್ರ ಮಾಡಿಸುವುದಿಲ್ಲ. ಇದೇ ಕ್ಷೇತ್ರವನ್ನು ಪ್ರತಿನಿಧಿಸುವ ಹಾಲಿ ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹಾದೇವಪ್ಪನವರು ಲೋಕೋಪಯೋಗಿ ಸಚಿವರಾಗಿದ್ದಾಗ ರಾಷ್ಟ್ಟೀಯ ಹೆದ್ದಾರಿ ಪ್ರಾಧಿಕಾರದಿಂದ ಈ ರಸ್ತೆಯನ್ನು ಮಾಡಲಾಗಿತ್ತು ಎಂಬುದು ಇಲ್ಲಿ ಸ್ಮರಣೀಯ.
10 ಲಕ್ಷ ಪರಿಹಾರಕ್ಕೆ ಒತ್ತಾಯ
ರಸ್ತೆಯ ಪಕ್ಕದಲ್ಲಿ ಜಂಗಲ್ ಕಟಿಂಗ್ ಮಾಡದೇ ಇದ್ದ ಕಾರಣ ಎದುರು ಬದುರು ವಾಹನಗಳಿಗೆ ಕಾಣದ ಪರಿಣಾಮ ಭೀಕರ ಅಪಘಾತ ಆಗಿದೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವೇ ಇದರ ಹೊಣೆ ಹೊರಬೇಕಾಗುತ್ತದೆ. ಬಸ್ಸಿನಲ್ಲಿ ಇದ್ದ ಮಗು ಮತ್ತಿಬ್ಬರು ಸಾವು ಬದುಕಿನ ನಡುವ ಹೋರಾತ್ತಿದ್ದಾರೆ.ಅಪಘಾತದಲ್ಲಿ ಮಡಿದ ಎಲ್ಲ ಕುಟುಂಬಗಳಿಗೂ ಸರ್ಕಾರದ ತಕ್ಷಣವೇ 10 ಲಕ್ಷ ರೂ ಪರಿಹಾರ ನೀಡಬೇಕು.ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಆಗ್ರಹಿಸಿದ್ದಾರೆ.
ತಲಾ 2 ಲಕ್ಷ ರೂ.ಪರಿಹಾರ: ಸಿದ್ದರಾಮಯ್ಯ
ಬೆಂಗಳೂರು, ಮೇ 29: ಮೈಸೂರು ಜಿಲ್ಲೆಯ ತಿ.ನರಸೀಪುರದ ಮೂಗೂರಿನ ಬಳಿ ಕಾರು ಮತ್ತು ಬಸ್ ನಡುವೆಯಾಗಿರುವ ಅಪಘಾತದಲ್ಲಿ ಮೃತಪಟ್ಟಿರುವ ಬಳ್ಳಾರಿ ಮೂಲದ 10 ಜನರ ಕುಟುಂಬದವರಿಗೆ ತಲಾ 2 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಮಾಧ್ಯಮದವರೊಂದಿಗೆ ಇಂದು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಕೂಡಲೇ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮಾಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.