ಸುದ್ದಿಮೂಲ ವಾರ್ತೆ
ಮೈಸೂರು, ಮೇ 15: ಮೈಸೂರು ಜಿಲ್ಲೆಯ ರಾಜಕಾರಣಕ್ಕೆ ತನ್ನದೇ ಆದ ಇತಿಹಾಸ ಇದೆ. 1978 ರಿಂದ ಹೆಚ್ಚು ಕಡಿಮೆ 1989 ರವರೆಗೆ ನಡೆದಿದ್ದು ಮರ್ಯಾದಾಯುತ ಮತ್ತು ನೈತಿಕ ತಳಹದಿಯ ಮೇಲೆಯೇ. ಆ ದಿನಗಳಲ್ಲಿ ಶಾಸಕರಾಗಿ ಆದವರ ಚಾರಿತ್ರ್ಯ ಮತ್ತು ಗೌರವಯುತ ನಡವಳಿಕೆಯಿಂದ ಗಮನಿಸಿದರೇ ಅವತ್ತಿನ ರಾಜಕಾರಣ ಹೇಗಿತ್ತು, ಇವತ್ತಿನ ರಾಜಕಾರಣ ಎತ್ತ ದಾರಿ ಸಾಗುತ್ತಿದೆ ಎಂಬುದು ತಿಳಿಯುತ್ತದೆ. ಏನೇ ಇರಲಿ 2023ರ ಚುನಾವಣೆ ಹಲವು ಪ್ತಥಮಗಳು ಮತ್ತು ವಿಶೇಷತೆಗಳಿಗೆ ಸಾಕ್ಷಿಯಾಗಿದೆ.
ಈ ಬಾರಿ 11 ಕ್ಷೇತ್ರಗಳಿಗೆ ನಡೆದ ಚುನಾವಣಿಯಲ್ಲಿ ವಿದ್ಯಾವಂತ ಯುವಕರು ಮತ್ತು ಸ್ಥಳೀಯರು ಆಯ್ಕೆ
ಆಗಿರುವುದು ವಿಶೇಷವೇ. ಇದು ಮೈಸೂರು ರಾಜಕಾರಣಕ್ಕೆ ದಿಕ್ಸೂಚಿಯೂ ಹೌದು ಎಂಬುದರಲ್ಲಿ ಮರು ಮಾತಿಲ್ಲ. ಎಲ್ಲಾ ಅಪಾಯಗಳಿಂದ ರಾಜಕೀಯ ಅನಕ್ಷರತೆ ಹೆಚ್ಚು ಅಪಾಯ. ಅನುಭವ ಅಥವಾ ಶಿಕ್ಷಣ ಎರಡು ಇರಬೇಕು ಇಲ್ಲದಿದ್ದರೆ ಅನಾಹುತಗಳು ಜಾಸ್ತಿ. ಈಗ ವಿದ್ಯಾವಂತರು ಆಯ್ಕೆ ಆಗುತ್ತಿರುವುದು ಉತ್ತಮ ಬೆಳವಣಿಗೆಯೇ ಆದರೆ. ಅವರು ಅವ್ಯವಸ್ಥೆಯ ನಡುವೆ ಸಮಾಜಮುಖಿಯಾಗಬೇಕಷ್ಟೇ.
ವಿಶೇಷ ಸಂಗತಿಯೆಂದರೇ ಈ ಚುನಾವಣೆಯಲ್ಲಿ ಮೈಸೂರು ನಗರದೊಳಗೆ ಇರುವ ಚಾಮರಾಜ ಕ್ಷೇತ್ರದಲ್ಲಿ 2018 ಮತ್ತು 2023 ರ ಚುನಾವಣೆಯಲ್ಲಿ ಸತತವಾಗಿ ಸ್ಥಳೇಯರೇ ಆಯ್ಕೆಯಾಗಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಸ್ಥಳೀಕರಾದ ಎಲ್. ನಾಗೇಂದ್ರ ಮತ್ತು ಈಗ ಕಾಂಗ್ರೆಸ್ನಿಂದ ಕೆ.ಹರೀಶ್ಗೌಡ ಆಯ್ಕೆ ಆಗಿದ್ದಾರೆ. ವಿಶೇಷವೆಂದರೆ ಇಬ್ಬರೂ ಕೂಡ ಒಂದೇ ಊರಿನವರು. ನಗರದೊಳಗಿದ್ದರೂ ತನ್ನ ಗ್ರಾಮೀಣ ಸೊಗಡನ್ನು ಬಿಟ್ಟುಕೊಡದ ಕನ್ನೇಗೌಡನಕೊಪ್ಪಲಿನವರು. ಹಿಂದೆಲ್ಲಾ 1686 ರಲ್ಲಿ ಪಡುವಾರಹಳ್ಳಿಯ ಚಿಕ್ಕಬೋರಯ್ಯನವರು ಬಿಟ್ಟರೆ ಉಳಿವರೆಲ್ಲರೂ ಹೊರ ಜಿಲ್ಲೆಯವರೇ ಆಯ್ಕೆ ಆಗಿದ್ದರು.
ಯಾರ್ಯಾರು ಆಯ್ಕೆ ಆಗಿದ್ದರು?
1978 ರಲ್ಲಿ ಜನತಾಪಕ್ಷದಿಂದ ಆಯ್ಕೆಯಾಗಿದ್ದ ಕೆ.ಪುಟ್ಟಸ್ವಾಮಿ ಅವರು ಮೂಲತಃ ಮಂಡ್ಯ ಜಿಲ್ಲೆ ಅರಕೆರೆಯವರು. ಅದೇ ವರ್ಷದ ಕೊನೆಯಲ್ಲಿ ನಡೆದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆ ಬೆಳಗೊಳ ಗ್ರಾಮದ ಬಿ.ಎನ್.ಕೆಂಗೇಗೌಡರು ಆಯ್ಕೆ. 1983 ರಲ್ಲಿ ಜನತಾಪಕ್ಷದಿಂದ ಆಯ್ಕೆಯಾಗಿದ್ದ ಎಚ್.ಕೆಂಪೇಗೌಡರು ಮಂಡ್ಯ ಜಿಲ್ಲೆ ಕೆ.ಆರ್.ಪೇಟಿ ತಾಲೂಕಿನವರು. 1985ರ ಚುನಾವಣೆಯಲ್ಲಿ ಆಯ್ಕೆಯಾದವರು ಇಂದು ಸಿಎಂ ಗಾದಿಗೆ ಪ್ರಬಲ ಆಕಾಂಕ್ಷಿ ಆಗಿರುವ ಸಿದ್ದರಾಮಯ್ಯನವರಿಗೆ ರಾಜಕೀಯ ನೆಲೆ ಕಲ್ಪಿಸಿದ ಮೈಸೂರು ಕುಪ್ಪೆಗಾಲದ ಕೆಂಪೀರೇಗೌಡರು 1989 ರಲ್ಲಿ ಜನತಾಪಕ್ಷದಿಂದ ಆಯ್ಕೆಯಾಗಿದ್ದರು.
1989 ರಲ್ಲಿ ಕಾಂಗ್ರೆಸ್ನಿಂದ ಆಯ್ಕೆ ಆಗಿದ್ದ ಕೆ. ಹರ್ಷಕುಮಾರಗೌಡರು ಕೆ.ಆರ್.ನಗರ ತಾಲೂಕಿನ ಹೊಸೂರು
ಗ್ರಾಮದವರು.1994,1999,2004,2008 ರವರೆಗೆ ನಡೆದ ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿಯಿಂದ ಆಯ್ಕೆಯಾದ ದಿವಂಗತ ಎಚ್.ಎಸ್.ಶಂಕರಲಿಂಗೇಗೌಡರು ಮತ್ತು ೨೦೧೩ ರ ಚುನಾವಣೆಯಲ್ಲಿ ಬಿಜೆಪಿಯಿಂದ ಚುನಾಯಿತರಾಗಿದ್ದ ವಾಸು ಮಂಡ್ಯ ಜಿಲ್ಲೆಯವರು.
ಡಿಗ್ರಿ, ಡಬ್ಬಲ್ ಡಿಗ್ರಿ ಪಡೆದು ಆಯ್ಕೆದವರು ಯಾರು ?
ಮೈಸೂರು ಜಿಲ್ಲೆಯ ಒಟ್ಟು 11 ಕ್ಷೇತ್ರದ ಪೈಕಿ ೫ ಮಂದಿ ಹೊಸಬರು ವಿಧಾನಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳು ಪದವೀಧರರು ಎನ್ನುವುದೇ ವಿಶೇಷ.ಹುಣಸೂರು ಕ್ಷೇತ್ರದಿಂದ ಜಿ.ಡಿ.ಹರೀಶ್ಗೌಡ, ನಂಜನಗೂಡಿನಲ್ಲಿ ದರ್ಶನ್ ಧ್ರುವನಾರಾಯಣ್, ಕೃಷ್ಣರಾಜದಿಂದ ಟಿ.ಎಸ್.ಶ್ರೀವತ್ಸ, ಕೆ.ಆರ್.ನಗರದಲ್ಲಿ ಡಿ.ರವಿಶಂಕರ್ ಹಾಗೂ ಚಾಮರಾಜದಲ್ಲಿ ಕೆ.ಹರೀಶ್ಗೌಡ ಜಯಭೇರಿ ಬಾರಿಸಿದ್ದಾರೆ ಆರ್ಎಸ್.ಶ್ರೀವತ್ಸ ಅವರು ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಚುನಾಯಿತರಾದರೆ, ರವಿಶಂಕರ್ ಹಾಗೂ ಹರೀಶ್ಗೌಡ ತಮ್ಮ ಎರಡನೇ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿದ್ದಾರೆ.
1.ಬಿ.ಎ. ಪದವೀಧರ ಕೆ.ಹರೀಶ್ಗೌಡ
-ಚಾಮರಾಜ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಕೆ.ಹರೀಶ್ ಗೌಡ, ಮಹಾರಾಜ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡಿದ್ದಾರೆ. ಇದೇ ಕ್ಷೇತ್ರದಲ್ಲಿ 2018 ರಲಿ ಜೆಡಿಎಸ್ನಿಂದ ಟಿಕೆಟ್ ವಂಚಿತರಾಗಿ ಬಂಡೆದ್ದು ಪಕ್ಷೇತರರಾಗಿ ನಿಂತು ಸೋತಿದ್ದ ಕೆ.ಹರೀಶ್ ಗೌಡ ಈ ಬಾರಿ 4,094 ಮತಗಳ ಅಂತರದಿಂದ ಗೆದ್ದಿದ್ದಾರೆ.
2.ಎಲ್ಎಲ್ಬಿ ಪದವೀಧರ ದರ್ಶನ್ ಧ್ರುವನಾರಾಯಣ್
-ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಪ್ರಥಮವಾಗಿ ಆಯ್ಕೆ ಆಗಿರುವ ಶಾಸಕ ದರ್ಶನ್ ಧ್ರುವನಾರಾಯಣ್ ಅವರು 2020ರಲ್ಲಿ ಲಂಡನ್ನಲ್ಲಿ ಸಾರ್ವಜನಿಕ ನೀತಿ ವಿಷಯದಲ್ಲಿ ಎಂಎಸ್ಸಿ ಪದವಿ ಹಾಗೂ 2018ರಲ್ಲಿ ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಬಿಎ, ಎಲ್ಎಲ್ಬಿ ಪದವಿ ಪಡೆದಿದ್ದಾರೆ. 28 ವರ್ಷದ ದರ್ಶನ್ ಜಿಲ್ಲೆಯಲ್ಲೇ ಅತಿ ಕಿರಿಯ ಶಾಸಕ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ.
3,ಬಿಕಾಂ ಪದವೀಧರ ಶ್ರೀವತ್ಸ
-ಇಡೀ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಏಕೈಕ ಶಾಸಕ ಎಂದರೆ ಅದು ಕೃಷ್ಣರಾಜ ಕ್ಷೇತ್ರದ ನೂತನ ಶಾಸಕ ಟಿ.ಎಸ್.ಶ್ರೀವತ್ಸ. 1988ರಿಂದ ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಿಂದ ಪಕ್ಷ ಸಂಘಟನೆ ಕೆಲಸ ಮಾಡಿರುವ 56 ವರ್ಷದ ಶ್ರೀವತ್ಸ ಅವರು ನಗರದ ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ.
4.ಎಲ್ಎಲ್ಬಿ ಪದವೀಧರ ಡಿ.ರವಿಶಂಕರ್
-ಕೆ.ಆರ್.ನಗರದಲ್ಲಿ ಮೊದಲ ಬಾರಿ ಜೆಡಿಎಸ್ ಪ್ರಭಾವಿ ನಾಯಕ ಸಾ.ರಾ.ಮಹೇಶ್ ವಿರುದ್ಧ ಸೋತಿದ್ದ ಕಾಂಗ್ರೆಸ್ ಡಿ.ರವಿಶಂಕರ್, ಎರಡನೇ ಪ್ರಯತ್ನದಲ್ಲಿ ಗೆಲುವಿನ ಸಿಹಿ ಸವಿದಿದ್ದಾರೆ. ಕಳೆದ ಬಾರಿ 1,779 ಮತಗಳಿಂದ ಸೋತಿದ್ದ ಇವರು, ಈ ಬಾರಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.
5-ಬಿಇ ಪದವೀಧರ ಜಿ.ಡಿ.ಹರೀಶ್ಗೌಡ
ಹುಣಸೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಜಿ.ಡಿ.ಹರೀಶ್ ಗೌಡ ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆ ಎಂಜಿನಿಯರಿಂಗ್ (ಎನ್ಐಇ) ಕಾಲೇಜಿನಲ್ಲಿ ಬಿ.ಇ ಪದವಿ ಪಡೆದಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಶಾಸಕ ಕಾಂಗ್ರೆಸ್ನ ಎಚ್.ಪಿ.ಮಂಜುನಾಥ್ ಅವರನ್ನು ಮಣಿಸಿ ಈ ಬಾರಿ ಕ್ಷೇತ್ರದ ಶಾಸಕರಾಗಿ ಜನಾಶೀರ್ವಾದ ಪಡೆದಿದ್ದಾರೆ