ಸುದ್ದಿಮೂಲ ವಾರ್ತೆ
ದೇವನಹಳ್ಳಿ , ಆ.27: ನಮ್ಮ ಪೂರ್ವಜರು ಪ್ರತಿ ಗ್ರಾಮದಲ್ಲಿ ಒಂದು ಅಶ್ವಥಕಟ್ಟೆಯನ್ನು ನಿರ್ಮಿಸುತ್ತಿದ್ದರು. ಹಬ್ಬ ಹರಿದಿನಗಳಲ್ಲಿ ಅಶ್ವತ್ಥಕಟ್ಟೆಗೆ ಪೂಜೆ ಹಾಗೂ ನ್ಯಾಯ ಪಂಚಾಯತಿಗಳನ್ನು ಮಾಡುತ್ತಿದ್ದರು. ಆದರೆ ಇಂದು ಅಶ್ವಥಕಟ್ಟೆಗಳು ಮಾಯವಾಗುತ್ತಿವೆ. ಇರುವ ಅಶ್ವತ್ಥಕಟ್ಟೆಗಳನ್ನು ಸಂರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಪ್ರಸನ್ನಹಳ್ಳಿ ವಿರೂಪಾಕ್ಷಯ್ಯ ತಿಳಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಪ್ರಸನ್ನಹಳ್ಳಿಯಲ್ಲಿರುವ 280 ವರ್ಷ ಹಳೆಯದಾದ ಅಶ್ವಥಕಟ್ಟೆಯ ಜೀರ್ಣೊದ್ದಾರ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅನೇಕ ದಾನಿಗಳ ಸಹಕಾರ ಹಾಗೂ ಪುರಸಭೆಯ ಸಹಕಾರದೊಂದಿಗೆ 15 ಲಕ್ಷ ರೂ ವೆಚ್ಚದಲ್ಲಿ ಬೃಹತ್ ಅಶ್ವಥಕಟ್ಟೆಯನ್ನು ಜೋರ್ಣೋದ್ದಾರೆ ಮಾಡಿದ್ದೇವೆ. ಅಶ್ವತ್ಥಕಟ್ಟೆಗೆ ಬಂಡೆಗಳನ್ನು ಬಳಸಿ ವಿನೂತನವಾಗಿ ನಿರ್ಮಿಸಲಾಗಿದ್ದು ಈ ಹಿಂದೆ ಇದ್ದ ಹಳೆಯ ನಾಗರುಕಲ್ಲುಗಳನ್ನು ಹಾಗೆ ಉಳಿಸಿ ಪ್ರತಿಷ್ಠಾಪಿಸಲಾಗಿದೆ. ಇದರಿಂದ ಗ್ರಾಮದ ಜನತೆ ಹಬ್ಬ ಹರಿದಿನಗಳಲ್ಲಿ ಅಶ್ವತಕಟ್ಟೆ ಹಾಗು ನಾಗರ ಪಂಚಮಿಯಂದು ನಾಗರ ಪೂಜಾಕೈಂಕರ್ಯಗಳಿಗೆ ಸಹಕಾರಿಯಾಗಲಿದೆ ಎಂದರು.
ವೀರಶೈವ ಸಮಾಜ ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಿ ಅಶ್ವತ್ಥಕಟ್ಟೆಗಳು ಜೀರ್ಣೊದ್ದಾರ ಮಾಡುವುದರಿಂದ ಪೂಜಾ ಕೈಂಕರ್ಯಗಳಿಗೆ ಅನುಕೂಲವಾಗಲಿದೆ. ಅಶ್ವತ್ಥ ವೃಕ್ಷವನ್ನು ಪ್ರತಿನಿತ್ಯ ಪೂಜಿಸಿದರೆ ಕೆಲವೊಂದು ದೋಷಗಳು ನಿವಾರಣೆಯಾಗುತ್ತದೆಂದು ಹಿರಿಯರು ತಿಳಿಸಿದ್ದಾರೆ. ಪವಿತ್ರವಾದ ಮರ ಎಂದರೆ ಅಶ್ವತ್ಥಮರ ಈ ಮರದಲ್ಲಿ ಎಲ್ಲಾ ದೇವತೆಗಳು ನೆಲೆಸಿರುತ್ತಾರೆಂದು ನಂಬಲಾಗುತ್ತದೆ. ಇದು ಅನೇಕ ಕಾಯಿಲೆಗಳಿಗೆ ಔಷದ ನೀಡುವ ಶಕ್ತಿಯನ್ನು ಹೊಂದಿದೆ. ಹಾಗಾಗಿ ಹಿಂದಿನ ಕಾಲದಲ್ಲಿ ದೈವ ಸ್ವರೂಪದ ಮರವೆಂದು ಪೂಜಿಸುತ್ತಾಬಂದಿದ್ದಾರೆ. ಸದಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಅಶ್ವತ್ಥಮರವನ್ನು ಪೂಜಿಸುವ ಮೂಲಕ ಸಾಕಷ್ಟು ಅನುಕೂಲಗಳನ್ನು ಪಡೆದುಕೊಳ್ಳಬಹುದು ಎಂದರು.
ಇದೆ ವೇಳೆ ಸ್ಥಳಿಯ ಮುಖಂಡರಾದ ಅಂತರರಾಷ್ಟ್ರೀಯ ಅಥ್ಲೇಟಿಕ್ ಕ್ರೀಡಾಪಟು ಡಿ.ಎ.ನಟರಾಜ್, ವಿಜಯ್ಕುಮಾರ್.ಡಿ.ಎನ್, ಸಂದೀಪ್, ಶಿವಕುಮಾರ್, ಅಶ್ವಥಪ್ಪ, ರಮೇಶ್, ಸಿದ್ದಲಿಂಗಯ್ಯ, ಮಲ್ಲಿಕಾರ್ಜುನ, ರಾಜಣ್ಣ, ಬಸವರಾಜ್, ವೆಂಕಟೇಶ್, ನವೀನ್, ನಾಗರಾಜ್ ವೇಣುಗೋಪಾಲ್ ಸೇರಿದಂತೆ ಪ್ರಸನ್ನಹಳ್ಳಿಯ ಅನೇಕ ಮುಖಂಡರು ಗ್ರಾಮಸ್ಥರು ಇದ್ದರು.