ಸುದ್ದಿಮೂಲ ವಾರ್ತೆ
ತಿಪಟೂರು, ಜು.15: ರಾಜ್ಯ ಸರ್ಕಾರ ಕ್ವಿಂಟಾಲ್ ಕೊಬ್ಬರಿಗೆ 1,250ರೂ. ಪ್ರೋತ್ಸಾಹ ಧನ ಘೋಷಿಸಿರುವುದು ರೈತರಿಗೆ ಮಾಡಿರುವ ದೊಡ್ಡ ಅವಮಾನ ಎಂದು ತಿಪಟೂರು ತಾಲ್ಲೂಕು ರೈತ ಸಂಘದ ಅಧ್ಯಕ್ಷ ಜಯಚಂದ್ರ ಶರ್ಮ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಬ್ಬರಿಗೆ ಬೆಂಬಲ ಬೆಲೆ ಕೊಡುವಂತೆ ನಾಟಕ ಮಾಡಿ ರೈತರಿಗೆ ಕಾಂಗ್ರೆಸ್ ಸರ್ಕಾರ ಮೋಸ ಮಾಡಿದೆ. ಬೆಂಬಲ ಬೆಲೆ ಹಾಗೂ ಪ್ರೋತ್ಸಾಹ ಧನಕ್ಕೆ ಒತ್ತಾಯಿಸಿ ಕಳೆದ ಆರು ತಿಂಗಳಿಂದ ಸರಣಿ ಹೋರಾಟ ಮಾಡಿದ್ದು, ಅದರ ಫಲವಾಗಿ ಬೆಂಬಲ ಬೆಲೆ ಘೋಷಿಸಿದೆ. ಆದರೆ, ಕಡಿಮೆ ಮೊತ್ತ ಘೋಷಿಸುವ ಮೂಲಕ ರೈತರನ್ನು ಅವಮಾನಿಸಿದೆ ಎಂದು ಅವರು ಆರೋಪಿಸಿದರು.
ಜಯಾನಂದಪ್ಪ ಮಾತನಾಡಿ, ನಾವು ಈ ಹಿಂದಿನ ರಾಜ್ಯ ಸರ್ಕಾರದ ವಿರುದ್ಧ ಹೋರಾಟ ಮಾಡಿದ್ದರ ಫಲವಾಗಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಕ್ವಿಂಟಾಲ್ ಕೊಬ್ಬರಿ ಗೆ 15,000 ನಿಗದಿಪಡಿಸುತ್ತೇವೆಂದು ಆಶ್ವಾಸನೆ ನೀಡಿದ್ದರು. ಆದರೆ ಇಂದು ರಾಜ್ಯ ಸರ್ಕಾರವು ಕ್ವಿಂಟಾಲ್ ಕೊಬ್ಬರಿಗೆ ರೂ.1,250 ಪ್ರೋತ್ಸಾಹ ಧನವನ್ನು ಘೋಷಿಸಿದ್ದು, ನಫೆಡ್ ಮೂಲಕ ಖರೀದಿಯಾಗುವ ಕೊಬ್ಬರಿಗೆ ಮಾತ್ರ ಅನ್ವಯವಾಗುತ್ತದೆ ಎಂದು ತೀರ್ಮಾನಿಸಿರುವುದು ರೈತರಿಗೆ ಮಾಡಿರುವ ದೊಡ್ಡ ಅವಮಾನ. ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಹೇಳಿದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ರೈತರಿಗೆ ಆವರ್ತ ನಿಧಿಯಾಗಿ ರೂ.3,500 ಕೋಟಿ ಮೀಸಲಿಟ್ಟಿದ್ದಾಗಿ ಹೇಳಿತ್ತು. ಈಗಿನ ಬಜೆಟ್ ನಲ್ಲಿ ಅದರ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ. ಈ ಹಿಂದೆ ರೈತರಿಗೆ ರಾಜ್ಯ ಸರ್ಕಾರ
ನೀಡುತ್ತಿದ್ದ ಕೃಷಿ ಸಮ್ಮಾನ್ ಯೋಜನೆಯ 2000 ಕೋಟಿ ರೂಗಳನ್ನು ಸಹ ನಿಲ್ಲಿಸಲಾಗಿದೆ. ರಾಜ್ಯ ಸರ್ಕಾರವು ರೈತರ ಬಗ್ಗೆ ಆಲೋಚನೆ ಮಾಡಿ ನಾವುಗಳು ಕೇಳಿರುವ ಕ್ವಿಂಟಲ್ ಕೊಬ್ಬರಿಗೆ ರೂ. 5000 ಪ್ರೋತ್ಸಾಹ ಧನವನ್ನು ಕೊಡಬೇಕು. ಇಲ್ಲದಿದ್ದಲ್ಲಿ ಇದರ ಪರಿಣಾಮವನ್ನು ಮುಂಬರುವ ಎಲ್ಲಾ
ಚುನಾವಣೆಗಳಲ್ಲಿ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ರೈತ ಮುಖಂಡರಾದ ಯೋಗೀಶ್ವರ್ ಸ್ವಾಮಿ, ಟಿ.ಬಿ. ಜಯಾನಂದಪ್ಪ, ಹಸಿರು ಸೇನೆ ಮುಖಂಡರಾದ ತಿಮ್ಲಾಪುರ ದೇವರಾಜು, ತಾಲೂಕು ಅಧ್ಯಕ್ಷರಾದ ಜಯಚಂದ್ರ ಶರ್ಮ, ಕಾರ್ಯದರ್ಶಿ ಶ್ರೀಹರ್ಷ, ತಡಸೂರು
ನಾಗಣ್ಣ, ಡಾ. ಶಿವಶಂಕರಪ್ಪ, ಶ್ರೀಕಾಂತ್, ಮಲ್ಲೇನಹಳ್ಳಿ ಕಾಂತರಾಜು, ಮನೋಹರ್ ಪಟೇಲ್ ಮತ್ತಿತರ ರೈತ ಮುಖಂಡರುಗಳು ಉಪಸ್ಥಿತರಿದ್ದರು.