ಸುದ್ದಿಮೂಲ ವಾರ್ತೆ
ಬೆಂಗಳೂರು, ಸೆ.15: ಸಂವಿಧಾನ ವಿರೋಧಿ ಶಕ್ತಿಗಳು ಸಂವಿಧಾನವನ್ನು ನಾಶಗೊಳಿಸಿ ಮತ್ತೆ ಮನುಸ್ಮೃತಿ ಜಾರಿಗೆ ಹುನ್ನಾರ ನಡೆಸುತ್ತಿವೆ. ಈ ಬಗ್ಗೆ ಎಚ್ಚರ ಮತ್ತು ಜಾಗೃತಿ ಇರಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿಗೆ ಕರೆ ನೀಡಿದರು.
ಸಮಾಜ ಕಲ್ಯಾಣ ಇಲಾಖೆ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ವಿಧಾನಸೌಧದಲ್ಲಿ ಆಯೋಜಿಸಿದ್ದ ‘ಭಾರತದ ಸಂವಿಧಾನ ಪೀಠಿಕೆಯ ಜಾಗತಿಕ ವಾಚನ’ದ ಅಭೂತಪೂರ್ವ ಕಾರ್ಯಕ್ರಮವನ್ನು ಸಂವಿಧಾನ ಪೀಠಿಕೆ ಓದುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಂವಿಧಾನದ ನಾಶ ಮತ್ತು ಮನುಸ್ಮೃತಿಯ ಜಾರಿ ಎಂದರೆ ಶೇ90 ರಷ್ಟು ಭಾರತೀಯರನ್ನು ಮತ್ತೆ ಗುಲಾಮಗಿರಿಗೆ ತಳ್ಳುವುದಾಗಿದೆ. ಇದಕ್ಕಾಗಿ ಬಹಳ ಕುತಂತ್ರಗಳು ನಡೆಯುತ್ತಿವೆ ಎಂದು ಎಚ್ಚರಿಸಿದರು.
‘ವೀ ದಿ ಪೀಪಲ್ ಆಫ್ ಇಂಡಿಯಾ’ ಎನ್ನುವ ಮೂಲಕವೇ ನಮ್ಮ ಸಂವಿಧಾನ ತೆರೆದುಕೊಳ್ಳುತ್ತದೆ. ಸಂವಿಧಾನದ ಆಶಯಗಳನ್ನು ಪರಿಣಾಮಕಾರಿಯಾಗಿ ಅರ್ಥೈಸಿಕೊಂಡು ಪಾಲಿಸದಿದ್ದರೆ ಸಮ ಸಮಾಜ ನಿರ್ಮಾಣ ಸಾಧ್ಯವಿಲ್ಲ. ಸಂವಿಧಾನದ ಸಮ ಸಮಾಜ ಮತ್ತು ಜಾತ್ಯತೀತ ತತ್ವದ ಆಶಯಗಳಂತೆಯೇ ನಮ್ಮ ಸರ್ಕಾರ ಸರ್ವರ ಏಳಿಗೆಯ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಜನರ ಹಣವನ್ನು ಮತ್ತೆ ಜನರ ಬದುಕಿಗೇ ಮರಳಿಸುವುದು ನಮ್ಮ ಕಾರ್ಯಕ್ರಮಗಳ ಉದ್ದೇಶವಾಗಿದೆ ಎಂದರು.
ಅಂಬೇಡ್ಕರ್ ಹಾಕಿಕೊಟ್ಟ ಹಾದಿ:
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಹಾಕಿಕೊಟ್ಟ ಹಾದಿಯಲ್ಲಿ ನಡೆದರೆ ನಮ್ಮ ಯುವ ಸಮೂಹದ ಹಾಗೂ ದೇಶದ ಪ್ರಗತಿ ಸಾಧ್ಯ. ಈ ವರ್ಷದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಗುರಿ ಯುವ ಸಮುದಾಯದ ಸಬಲೀಕರಣಕ್ಕೆ ಸಂಕಲ್ಪ ಮಾಡಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ನಾನು ಪಕ್ಷದ ಜವಾಬ್ದಾರಿ ವಹಿಸಿಕೊಂಡ ನಂತರ ಪ್ರತಿಜ್ಞಾ ಕಾರ್ಯಕ್ರಮ ಮಾಡಲಾಗಿತ್ತು. ಈಗಿನ ಮತ್ತು ಭವಿಷ್ಯದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯುವ ಸಮುದಾಯ ಹಾಗೂ ಮಕ್ಕಳ ಪಾತ್ರದ ಬಗ್ಗೆ ನಾವೆಲ್ಲ ಯೋಜಿಸಬೇಕಿದೆ ಎಂದರು.
ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುವ ಪ್ರಕ್ರಿಯೆಯಲ್ಲಿ ಅವರನ್ನು ಒಳಗೊಳ್ಳುವ ಬಗ್ಗೆ ಗಮನ ಹರಿಸಬೇಕಿದೆ. ಸುಶಿಕ್ಷಿತ ಯುವ ಸಮುದಾಯ ಪ್ರಜಾಪ್ರಭುತ್ವ ದೇಶದ ಬಹುದೊಡ್ಡ ಆಸ್ತಿ. ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಅವರಿಗೆ, ಅವರ ಧ್ವನಿಗೆ ಮಹತ್ವ ನೀಡಬೇಕಿದೆ. ಇದಕ್ಕೆ ಮೊದಲು ಶಿಕ್ಷಣದ ಮೂಲಕ ಅವರನ್ನು ಬಲಿಷ್ಠ ಶಕ್ತಿಯಾಗಿ ಬೆಳೆಸಬೇಕಿದೆ. ಇದೆ ಪ್ರಜಾಪ್ರಭುತ್ವ ದಿನದ ಸಂಕಲ್ಪವಾಗಬೇಕಿದೆ. ಸುರಕ್ಷಿತ ಯುವಸಮುದಾಯ ಈ ದೇಶದ ದೊಡ್ಡ ಆಸ್ತಿ. ಮಕ್ಕಳಿಗೆ ಹಾಗೂ ಯುವ ಸಮುದಾಯಕ್ಕೆ ನೈತಿಕ ಶಿಕ್ಷಣದ ಮೂಲಕ ಅರಿವು ಮೂಡಿಸಬೇಕು. ಇದೇ ಈ ಪ್ರಜಾಪ್ರಭುತ್ವ ದಿನದ ನಮ್ಮ ಸಂಕಲ್ಪ.
ಸಂವಿಧಾನ ಕೇವಲ ವಕೀಲರ ದಾಖಲೆಗಳ ಪುಸ್ತಕವಲ್ಲ. ಇದು ಜೀವನದ ಯಂತ್ರ ಹಾಗೂ ಸ್ಫೂರ್ತಿಯಾಗಿದೆ. ಈ ಸ್ಫೂರ್ತಿ ಯುಗಗಳವರೆಗೆ ಸಾಗಲಿದೆ ಎಂದರ್ಥ. ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದೇಶವಾದ ನಮಗೆ ಇಂತಹ ಶ್ರೇಷ್ಠ ಸಂವಿಧಾನ ದೊರೆತಿರುವುದು ಪುಣ್ಯ. ಭಗವದ್ಗೀತೆ, ಕುರಾನ್ ಮತ್ತು ಬೈಬಲ್ ಗಳಷ್ಟೇ ಮುಖ್ಯವಾಗಿ ನಾವು ಸಂವಿಧಾನವನ್ನು ಗೌರವಿಸಿ, ಆರಾಧಿಸಿ, ರಕ್ಷಣೆ ಮಾಡಬೇಕು ಎಂದು ಸಲಹೆ ನೀಡಿದರು.
ಸಮಾಜ ಕಲ್ಯಾಣ ಸಚಿವ ಹೆಚ್.ಸಿ.ಮಹದೇವಪ್ಪ, ಗೃಹ ಸಚಿವ ಜಿ.ಪರಮೇಶ್ವರ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಮುನಿಯಪ್ಪ, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹಾಗೂ ಸಚಿವರುಗಳಾದ ಮಂಕಾಳ ವೈದ್ಯ, ಸತೀಶ್ ಜಾರಕಿಹೊಳಿ, ಕೆ.ಜೆ.ಜಾರ್ಜ್, ಈಶ್ವರ್ ಖಂಡ್ರೆ, ವಿಧಾನಪರಿಷತ್ ಸಭಾಪತಿ ಹೊರಟ್ಟಿ,ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರಾದ ಗೋವಿಂದರಾಜು, ವಿಧಾನ ಪರಿಷತ್ ಸದಸ್ಯರಾದ ಸುದಾಮ್ ದಾಸ್ ಸೇರಿ ಹಲವು ಶಾಸಕರು, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಸೇರಿ ಪೊಲೀಸ್ ಅಧಿಕಾರಿಗಳು ಹಾಗೂ ಮುಖಂಡರು
ಉಪಸ್ಥಿತರಿದ್ದರು.