ಸುದ್ದಿಮೂಲ ವಾರ್ತೆ
ಬೆಂಗಳೂರು.ಜು,4: ಮಗನ ಮರಣದ ನಂತರ ವಿಮಾ ಹಣವನ್ನು ನಕಲಿ ಸಹಿ ಮತ್ತು ನಕಲಿ ಖಾತೆ ಸೃಷ್ಟಿಸಿ ವಂಚಿಸಿದ ವಕೀಲ ಟಿ. ಪದ್ಮನಾಭ ಎಂಬುವರನ್ನು ವಕೀಲರ ಸಂಘದಿಂದ ವಜಾಗೊಳಿಸಿದ್ದು, ವಕೀಲರ ಸಂಘ ತಮಗೆ ನ್ಯಾಯ ದೊರಕಿಸಿಕೊಟ್ಟು ವಂಚಕರಿಗೆ ಈ ಮೂಲಕ ಎಚ್ಚರಿಕೆ ನೀಡಿದೆ ಎಂದು ತಂದೆ ತಾಯಿ ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಂದೆ ದಿವಾಕರ್ ಆಚಾರ್ ಹಾಗೂ ತಾಯಿ ಶಕುಂತಲಾ ಆಚಾರ್ ಅವರು ಮಗನನ್ನು ಕಳೆದುಕೊಂಡ ದುಃಖ ಒಂದೆಡೆಯಾದರೆ, ಮಗನ ವಿಮಾ ಹಣದಲ್ಲಿ ವಂಚನೆಯಾಗಿರುವುದು ಮತ್ತಷ್ಟು ಆಘಾತ ಮೂಡಿಸಿತ್ತು. ಈ ಸಂಬಂಧ ವಕೀಲರ ಸಂಘಕ್ಕೆ ನೀಡಿದ ದೂರು ಆಧರಿಸಿ ವಕೀಲರ ಸಂಘ ವಂಚಕ ವಕೀಲರನ್ನು ಸದಸ್ಯತ್ವದಿಂದ ವಜಾಗೊಳಿಸಿದೆ. ಇದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆ ಎಂದು ಹೇಳಿದರು.
ವಕೀಲರಾದ ಟಿ.ಪದ್ಮನಾಭ ಕುಮಾರ್ ಎಂಬುವರು ನಮ್ಮ ಮಗನಾದ ಡಿ. ಶರಣ್ ಆಚಾರ್ ಮರಣದ ವಿಮಾ ಹಣ ಕೊಡಿಸುವ ವಿಚಾರದಲ್ಲಿ ನಮ್ಮ ಪರವಾಗಿ ವಾದಿಸುತ್ತಿದ್ದರು. ನಂತರ ನ್ಯಾಯ ತೀರ್ಮಾನವಾಗಿ 15 ಲಕ್ಷ ರೂ.ಗಳು ಪರಿಹಾರವಾಗಿ ಬಂದಿತ್ತು. ಫೋರ್ಜರಿ ಸಹಿ ಮತ್ತು ನಕಲಿ ಖಾತೆ ಸೃಷ್ಟಿಸಿ, ಆ ಹಣವನ್ನು ಲಪಟಾಯಿಸಿದ್ದರು. ಅದರ ಕುರಿತು ಬಾರ್ ಕೌನ್ಸಿಲ್ ಗೆ ದೂರು ನೀಡಿದ್ದೆವು. ತದನಂತರ ಆ ವಕೀಲರು ತಪ್ಪಿತಸ್ಥರೆಂದು ಸಾಬೀತಾದ ಹಿನ್ನಲೆಯಲ್ಲಿ ಆತನನ್ನು ಬಾರ್ ಕೌನ್ಸಿಲ್ ವಜಾ ಮಾಡಿದೆ ಎಂದರು.
ಆದರೆ ಆ ವಕೀಲರು ಪ್ರಭಾವಿಯಾಗಿದ್ದು, ಅವರಿಂದ ನಮಗೆ ಮತ್ತು ನಮ್ಮ ಕುಟುಂಬದ ಯಾರಿಗೇ ಆಗಲಿ ಯಾವುದೇ ರೀತಿಯಲ್ಲೂ ತೊಂದರೆಯಾಗದಂತೆ ಸರ್ಕಾರ ಮತ್ತು ನ್ಯಾಯಾಂಗ ವ್ಯವಸ್ಥೆ ರಕ್ಷಣೆ ನೀಡಬೇಕು. ದುಃಖದಲ್ಲಿರುವ ನಮಗೆ ಆತ್ಮಸ್ಯೆರ್ಯ ತುಂಬಬೇಕೆಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ವಕೀಲರಾದ ಡಾ.ಗುಡೇಗೌಡ, ಎಚ್.ಜೆ.ಆನಂದ್, ಕೆ.ಸಿ.ಪುದೀಪ್ ಹಾಗೂ ಕನ್ನಡ ಪ್ರಾಧ್ಯಾಪಕರಾದ ಡಾ.ಹನಿಯೂರು ಚಂದ್ರೇಗೌಡ ಉಪಸ್ಥಿತರಿದ್ದರು.