ಸುದ್ದಿಮೂಲ ವಾರ್ತೆ
ಮೈಸೂರು, ಜೂ.18 : ಮೈಸೂರು ನಗರ ಪೊಲೀಸ್ ವಿಭಾಗದ ವತಿಯಿಂದ ನಗರದ ವರ್ತುಲ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾಗಳ ಬ್ಯಾಟರಿ ಹಾಗೂ ಯುಪಿಎಸ್ ಕಳ್ಳತನವಾಗಿದೆ.
ಪೊಲೀಸ್ ಬಡಾವಣೆ ಸಮೀಪದೆಡೆ ಹಾಗೂ ಚಿಕ್ಕಹಳ್ಳಿ ಸಮೀಪದ ದೊಡ್ಡ ಆಲದಮರದ ಬಳಿ ಸೇರಿದಂತೆ ಎರಡು ಕಡೆಗಳಲ್ಲಿ ಕಳ್ಳತನ ಆಗಿರುವುದು ಕಂಡುಬಂದಿದೆ. ಹಾರೆಯಿಂದ ಮೀಟಿ ಬಾಕ್ಸ್ ತೆರೆದು ಯುಪಿಎಸ್ ಇನ್ವರ್ಟರ್ ಮತ್ತು ಬ್ಯಾಟರಿಗಳನ್ನು ಕದ್ದೊಯ್ಯಲಾಗಿದೆ. ಎರಡೂ ಜಾಗಗಳಲ್ಲಿ ಕೇವಲ ಅರ್ಧ ಗಂಟೆಗಳ ಅಂತರದಲ್ಲಿ ಘಟನೆ ನಡೆದಿದೆ. ಚಾಲಾಕಿ ಕಳ್ಳರು ತಮ್ಮ ವಾಹನವನ್ನು ದೂರದಲ್ಲಿಯೇ ನಿಲ್ಲಿಸಿ, ಕ್ಯಾಮೆರಾ ದೃಷ್ಟಿ ತಮ್ಮ ಮೇಲೆ ಬೀಳದಂತೆ ಅಡ್ಡ ದಾರಿಯಲ್ಲಿ ಬಂದು ಕಳ್ಳತನ ಮಾಡಿದ್ದಾರೆ.
ಕಳೆದ ಎರಡು ತಿಂಗಳ ಹಿಂದಷ್ಟೇ ದುಬಾರಿ ಬೆಲೆಯ ಕ್ಯಾಮೆರಾಗಳನ್ನು ಹಾಕಲಾಗಿತ್ತು. ರಿಂಗ್ ರಸ್ತೆಯಲ್ಲಿ ಕಳೆದ ಒಂದು ತಿಂಗಳಿಂದ ಬೀದಿ ದೀಪಗಳನ್ನು ಹಾಕುತ್ತಿಲ್ಲ. ಇದರ ಲಾಭ ಪಡೆದು ಕಳ್ಳತನ ಮಾಡಲಾಗಿದೆ. ರಿಂಗ್ ರಸ್ತೆಯ ಬೀದಿ ದೀಪಗಳ ನಿರ್ವಹಣೆಯ ಹೊಣೆ ಹೊತ್ತಿರುವ ನಗರಪಾಲಿಕೆ ವಿದ್ಯುತ್ ಬಿಲ್ ಪಾವತಿಸದ ಹಿನ್ನೆಲೆಯಲ್ಲಿ ಸೆಸ್ಕ್ ನವರು ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿದ್ದಾರೆ. ಪರಿಣಾಮ, ಚಾಲಾಕಿ ಕಳ್ಳರಿಗೆ ಪುಕ್ಸಟ್ಟೆ ರಹದಾರಿ ಕೊಟ್ಟಂತಾಗಿದೆ.ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.