ಸುದ್ದಿಮೂಲ ವಾರ್ತೆ
ನೆಲಮಂಗಲ,ಅ.29:ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನುವಂತಾಗಿದೆ ಸೋಂಪುರ ಹೋಬಳಿಯ ರಾಗಿ ಬೆಳೆಯುವ ರೈತರ ಸ್ಥಿತಿ.
ಒಂದಷ್ಟು ದಿನಗಳು ಬಿಟ್ಟರೆ ಮುಂಗಾರು ಮಳೆ ಕಾಲ ಕಾಲಕ್ಕೆ ಹದವಾಗಿ ಬಿದ್ದು, ಉತ್ತಮ ರಾಗಿ ಫಸಲು ಬಂದಿತ್ತು. ರಾಗಿ ಪೈರಲ್ಲಿ ಹೂ ಬಂದು, ಅಗಳು ಕಟ್ಟುವ ಕಾಲಕ್ಕೆ ಮಳೆ ಕೈ ಕೊಟ್ಟಿದ್ದು, ತೇವಾಂಶದ ಕೊರತೆಯಿಂದ ಇಳುವರಿ ಕುಸಿಯುವ ಆತಂಕ ಮೂಡಿದೆ.
ರಾಗಿ ಜೊತೆಗೆ ತೊಗರಿ, ಅವರೆ, ಅಲಸಂದೆ, ಹುರುಳಿ ಬೆಳೆಗಳಿಗೂ ತೇವಾಂಶ ಇಲ್ಲದೇ ಫಸಲು ಕುಂಠಿತವಾಗುತ್ತದೆ.
ಹಿಂದೆ ಸೋಂಪುರ ಹೋಬಳಿಯಲ್ಲಿ ಮಳೆ ಇಲ್ಲದೇ ಬರ ಆವರಿಸಿಕೊಳ್ಳುವ ಮುನ್ಸೂಚನೆ ಇತ್ತು, ಅದರ ಮಧ್ಯೆ ಹದವಾದ ಮಳೆಯು ಆಗಿತ್ತು. ರಾಗಿ ಫಸಲು ಚೆನ್ನಾಗಿತ್ತು. ರಾಗಿ ಬಳಿಯುವ ಸಮಯದಲ್ಲಿ ಮಳೆ ಇಲ್ಲದಿರುವುದು ಇಳುವರಿ ಕುಸಿಯುವಂತೆ ಮಾಡುತ್ತದೆ ಎನ್ನುತ್ತಾರೆ ರೈತರು.
ನೆಲಮಂಗಲ ತಾಲ್ಲೂಕಿನಲ್ಲಿ ಈ ವರ್ಷ 12,155 ಹೆಕ್ಟರ್ ನಲ್ಲಿ ಕೇವಲ ಶೇಕಡ 65% ಬಿತ್ತನೆಯಾಗಿದೆ. ಕಳೆದ ಸಾಲಿಗಿಂತ ಶೇಕಡ 33 ರಷ್ಟು ಬಿತ್ತನೆಯ ಕೊರತೆ ಉಂಟಾಗಿದೆ.
ಮಳೆ ಇಲ್ಲದೆ ಇರುವುದರಿಂದ ರಾಗಿ ಪೈರು ನಡು ಸೊರಗಿ ನೆಲಕ್ಕೆ ಬೀಳುತ್ತವೆ. ಕೊಯ್ಲು ಮಾಡುವಾಗ ತೊಂದರೆ ಆಗುತ್ತದೆ. ಅಕಾಲಿಕ ಮಳೆ ಬಂದರೆ ಹುಲ್ಲು ಕೊಳೆಯುತ್ತದೆ, ಜಾನುವಾರುಗಳ ಮೇವಿಗೂ ಕೊರತೆ ಉಂಟಾಗುತ್ತದೆ ಎಂಬ ಆತಂಕ ಅವರದು.
ಸಾವಿರಾರು ರೂಪಾಯಿ ಖರ್ಚು ಮಾಡಿ ಬೇಸಾಯ ಮಾಡಿರುವ ರೈತರಿಗೆ ನಷ್ಟ ಉಂಟಾಗುವುದರ ಜೊತೆಗೆ ಪ್ರಮುಖವಾಗಿ ಹೈನುಗಾರಿಕೆಗೆ ಮೇವಿನ ಕೊರತೆ ಉಂಟಾಗುವ ಭಯ ರೈತರನ್ನು ಕಾಡುತ್ತಿದೆ.
ತಾಲ್ಲೂಕು ಕೃಷಿ ಇಲಾಖೆ ಮಾಹಿತಿಯಂತೆ .
ಒಂದೂವರೆ ಎಕರೆಯಷ್ಟು ರಾಗಿ ಬಿತ್ತನೆ ಮಾಡಿದ್ದೇವೆ. ಟ್ರಾಕ್ಟರ್ ನಲ್ಲಿ ಉಳುಮೆ, ಗೊಬ್ಬರ, ಕಳೆ ಕೀಳುವ ಕೆಲಸ ಎಲ್ಲ ಸೇರಿ ಈಗಲೇ ಸುಮಾರು 18ಸಾವಿರದಷ್ಟು ಖರ್ಚಾಗಿದೆ. ಇನ್ನು ಕೊಯ್ಲು, ಒಕ್ಕಣೆ ಇದೆ. ಮಳೆ ಇಲ್ಲದೆ ಇಳುವರಿ ಕಡಿಮೆಯಾದರೆ ಖರ್ಚು ಮಾಡಿದ ಬಂಡವಾಳವೂ ಸಿಗುವುದಿಲ್ಲ.
-ಗಂಗರಾಜಪ್ಪ, ರೈತ ದೇವಗಾನಹಳ್ಳಿ
ಈ ಸಮಯದಲ್ಲಿ ರಾಗಿ ಹೊಲದಲ್ಲಿ ತೇವಾಂಶ ಕಡಿಮೆಯಾಗಿ, ಪೈರು ಗೆದ್ದಲು ಹಿಡಿಯುತ್ತಿದೆ. ತೆನೆಗೆ ಹಿಲುಕು ರೋಗ ಬಂದು ರಾಗಿ ಹಾಗೂ ಹುಲ್ಲು ಎರಡರ ಕೊರತೆ ಉಂಟಾಗುತ್ತದೆ. ಜಾನುವಾರುಗಳ ಮೇವಿಗಾಗಿ 2 ಲಕ್ಷದಷ್ಟು ಖರ್ಚು ಮಾಡಿ 7 ಎಕರೆ ರಾಗಿ ಬಿತ್ತನೆ ಮಾಡಲಾಗಿದೆ.