ಸುದ್ದಿಮೂಲ ವಾರ್ತೆ
ಮೈಸೂರು, ಅ.30:ಪಕ್ಷವನ್ನು ತಳಮಟ್ಟದಿಂದ ಕಟ್ಟಿ ಬೆಳೆಸುತ್ತಿರುವ ಸಾಮಾನ್ಯ ಕಾರ್ಯಕರ್ತನಿಗೆ ಬರುವ ಮೈಸೂರು-ಕೊಡಗು ಲೋಕಸಭಾ ಟಿಕೇಟ್ ನೀಡಬೇಕೆಂಬ ಒಮ್ಮದ ಅಭಿಪ್ರಾಯದೊಂದಿಗೆ ಆಕಾಂಕ್ಷಿಗಳ ಪಟ್ಟಿಯನ್ನು ಗೌಪ್ಯವಾಗಿ ವರಿಷ್ಠರಿಗೆ ತಲುಪಿಸುವ ನಿರ್ಧಾರಕ್ಕೆ ಬರಲಾಯಿತು.
ಸೋಮವಾರ ನಗರದ ಖಾಸಗಿ ಹೋಟೆಲ್ನಲ್ಲಿ ನಡೆದ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಕ್ಷೇತ್ರದ 16ಬ್ಲಾಕಿನ ಅಧ್ಯಕ್ಷ, ಪದಾಧಿಕಾರಿಗಳು ಹಾಗೂ ಪ್ರಮುಖರ ಸಭೆಯಲ್ಲಿ ಮಂಡ್ಯ ಹಾಗೂ ಹಾಸನ ಜಿಲ್ಲಾ ಕಾಂಗ್ರೆಸ್ನಲ್ಲಿ ಉಂಟಾಗಿರುವ ಗೊಂದಲವನ್ನು ಮೈಸೂರಿನಲ್ಲಿ ಮಾಡಿಕೊಳ್ಳದಂತೆ ಪ್ರಮುಖರು ಇದೇ ವೇಳೆ ಎಚ್ಚರಿಕೆ ನೀಡಿದರು.
ಪಕ್ಷದ ಕಾರ್ಯಕರ್ತರಿಗೆ ನೀಡಿ ಅಥವಾ ಹಾಲಿ ಬಿಜೆಪಿ ಸಂಸದರನ್ನು ಸೋಲಿಸುವ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸುವ ನಿರ್ಧಾರವನ್ನು ಪಕ್ಷದ ವರಿಷ್ಠರು ಕೈಗೊಳ್ಳುವ ತೀರ್ಮಾನಕ್ಕೆ ತಾವೆಲ್ಲರೂ ಬದ್ಧರಾಗಿರುವುದಾಗಿ ಎಲ್ಲರೂ ಒಮ್ಮತದಲ್ಲಿ ಒಪ್ಪಿಕೊಂಡರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಟಿಕೇಟ್ ಆಕಾಂಕ್ಷಿಯೂ ಆಗಿರುವ ವಕೀಲರಾದ ಚಂದ್ರಮೌಳಿ ಮಾತನಾಡಿ, ಒಗ್ಗಟ್ಟಾಗಿ ಕೆಲಸ ಮಾಡಬೇಕು. ನಾನು ಆಕಾಂಕ್ಷಿ, ನಾನು ಆಕಾಂಕ್ಷಿಗಳೆನ್ನುವುದನ್ನು ಬಿಡಿ. ಈಗಾಗಲೇ ರಾಜ್ಯದಲ್ಲಿ ಅಧಿಕಾರದಲ್ಲಿದ್ದೇವೆ. ಬಿಜೆಪಿ ಪ್ರಧಾನಿ ನರೇಂದ್ರಮೋದಿ ಮುಖ ತೋರಿಸಿ ಗೆಲ್ಲುತ್ತಿದ್ದು, ಅದನ್ನು ಬದಲಾಯಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಶ್ರಮ ಹಾಕಬೇಕಿದೆ ಎಂದು ಹೇಳಿದರು.
ರಾಜ್ಯದಲ್ಲಿ ಸಿದ್ದರಾಮಯ್ಯನವರ ಜನಪರ ಯೋಜನೆಗಳನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕಿದೆ. ಹಿಂದೆ ಮೋದಿ ಹೋದ ಕಡೆಗಳಲ್ಲಿ ಗೆಲುವು ಎಂಬ ಮಾತು ಈಗ ಎಲ್ಲೆಡೆ ಸುಳ್ಳಾಗಿದೆ. ಇದಕ್ಕೆ ಕೊಡಗು ಜಿಲ್ಲೆಯೇ ಸಾಕ್ಷಿಯಾಗಿದ್ದು, ರಾಜ್ಯದಲ್ಲಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲುವ ವಾತಾವರಣ ಕಾಂಗ್ರೆಸ್ಗೆ ಇದೆ. ಹೀಗಾಗಿ ಎಲ್ಲರೂ ಒಂದಾಗಿ ಹೋಗೋಣ ಎಂದರು.
ಕಾಂಗ್ರೆಸ್ ನಗರಾಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕೊಡಗು ಜಿಲ್ಲಾಧ್ಯಕ್ಷ ಧರ್ಮಜಾ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜು, ಮಾಜಿ ಮಹಾಪೌರ ಅಯೂಬ್ ಖಾನ್, ಕಾಂಗ್ರೆಸ್ ನಗರಾಧ್ಯಕ್ಷ ಪುಷ್ಪಲತಾ ಚಿಕ್ಕಣ್ಣ, ಮಾಜಿ ಮಹಾಪೌರರಾದ ಪುಷ್ಪವಲ್ಲಿ, ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಸದಸ್ಯರಾದ ಶೋಭಾ ಸುನೀಲ್, ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷರಾದ ಲತಾ ಸಿದ್ದ ಶೆಟ್ಟಿ ಮತ್ತಿತರರು ಇದ್ದರು.