ಸುದ್ದಿಮೂಲ ವಾರ್ತೆ
ಮೈಸೂರು, ಅ.20 : ಮೈಸೂರಿನಲ್ಲಿ ರೈತ ದಸರಾ ಅಂಗವಾಗಿ ಶುಕ್ರವಾರ ನಡೆದ ಅನ್ನದಾತದ ಬೃಹತ್ ಮೆರವಣಿಗೆಯಲ್ಲಿ ಕಲಾ ತಂಡಗಳು ಗಮನ ಸೆಳೆದವು.
ಡೊಳ್ಳು ಕುಣಿತ ಹಾಗೂ ಗಾರುಡಿ ಗೊಂಬೆಗಳು. ಹೀಗೆ . ರೈತ ದಸರಾ ಭಾಗವಾಗಿ ಅಕರ್ಷಕ ಭಾರೀ ಮೆರವಣಿಗೆಯೂ ನಡೆಯಿತು. ಸಚಿವರಾದ ಎನ್.ಚೆಲುವರಾಯಸ್ವಾಮಿ, ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ, ಜಿಲ್ಲಾಧಿಕಾರಿ ಡಾ.ಕೆ.ರಾಜೇಂದ್ರ ಮತ್ತಿತರರು ಹಸಿರು ರುಮಾಲು ಧರಿಸಿ ಕೊಂಚ ದೂರ ಮೆರವಣಿಗೆಯಲ್ಲಿ ಸಾಗಿದರು.
ಇದೇ ವೇಳೆ ಕೃಷಿ ಸಚಿವರು ಎತ್ತಿನಗಾಡಿ ಓಡಿಸಿದರು. ನಂತರ ವೈದ್ಯಕೀಯ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಸಭಾಂಗಣದಲ್ಲಿ ನಡೆದ ರೈತ ದಸರಾ ಸಮಾರಂಭದಲ್ಲಿ ಪ್ರಗತಿಪರ ರೈತರನ್ನು ಸನ್ಮಾನಿಸಲಾಯಿತು.
ಈ ವೇಳೆ ಸಚಿವ ಡಾ.ಮಹದೇವಪ್ಪ ಮಾತನಾಡಿ, ದೇಶಕ್ಕೆ ಮಾದರಿ ಆಡಳಿದ ನೀಡಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ಭಾಗದಲ್ಲಿ ಕೃಷಿ, ನೀರಾವರಿ, ಹೈನುಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರವನ್ನು ಪ್ರೋತ್ಸಾಹಿಸಿ ಗ್ರಾಮೀಣ ಜನರ ಬೆನ್ನುಲುಬಾದ ಕೃಷಿ ಅಭಿವೃದ್ಧಿಗೆ ಉತ್ತೇಜನ ನೀಡಿರುವುದು ಅವಿಸ್ಮರಣೀಯ ಎಂದು ಸ್ಮರಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅವರು ಕೃಷಿ ಮತ್ತು ನೀರಾವರಿ ಗಮನದಲ್ಲಿರಿಸಿ ಬಾಕ್ರನಂಗಲ್ ಅಣೆಕಟ್ಟೆ ನಿರ್ಮಿಸಲು ಸಲಹೆ ನೀಡಿದ್ದನ್ನು ಅಂದಿನ ಪ್ರಧಾನಿ ನೆಹರು ಅವರ ಸರ್ಕಾರ ಪರಿಗಣಿಸಿತ್ತು. ಲಾಲ್ ಬಹದ್ದೂರು ಶಾಸ್ತ್ರಿ ಅವರ ಕಾಲದಲ್ಲಿ ಜೈ ಜವಾನ್ ಜೈ ಕಿಸಾನ್ ಎಂಬ ಘೋಷಣೆ ಮಾಡಿ ಆಹಾರ ಸ್ವಾವಲಂಬೆನೆಯನ್ನು ಬಲಪಡಿಸಿದರು.
ರೈತ ಸಮಸ್ಯೆಗಳ ಪರಿಹಾರಕ್ಕೆ ಹೊಸ ತಂತ್ರಜ್ಞಾನ ಮತ್ತು ವೈಜ್ಞಾನಿಕ ಉಪಾಯಗಳ ಮೂಲಕ ಕೃಷಿ ಅಭಿವೃದ್ಧಿ ಬೆಳವಣಿಗೆಗೆ ಪೂರಕವಾದ ಕಾರ್ಯಕ್ರಮಗಳನ್ನು ಕಾಂಗ್ರೆಸ್ ಸರ್ಕಾರ ಮಾಡಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರೈತ ಚಳುವಳಿಯಿಂದ ಬಂದಿದ್ದು, ರೈತರ ಸಮಸ್ಯೆಗಳು ಅವರ ಗಮನದಲ್ಲಿದೆ. ಸಂಕಷ್ಟದ ಕಾಲದಲ್ಲಿ ರೈತರ ಪರ ನಿಂತು, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಡಳಿತ ನಡೆಸಲಿದ್ದಾರೆ ಎಂದು ಹೇಳಿದರು.
ಕಿಡಿಕಾರಿದ ಕೃಷಿ ಸಚಿವರು
ಈ ಮಧ್ಯೆ ರೈತ ದಸರಾದ ವೇದಿಕೆಯಲ್ಲಿ ಕೃಷಿ ಸಚಿವ ಚಲುವರಾಯಸ್ವಾಮಿ ಕೇಂದ್ರ ಸರ್ಕಾರ ಮತ್ತು ರಾಜ್ಯದ ಸಂಸದರ ವಿರುದ್ಧ ಕಿಡಿಕಾರಿದರು. ಕಾವೇರಿ ನೀರು ಹಂಚಿಕೆ ವಿಚಾರವಾಗಿ ದೆಹಲಿಯ ಕೇಂದ್ರ ನಾಯಕರನ್ನ ಭೇಟಿಯಾಗಲು ತೆರಳಿದ್ದ ವೇಳೆ ಒಂದು ಅವಕಾಶವನ್ನು ಕಲ್ಪಿಸಿಕೊಡಲಿಲ್ಲ. ರಾಜ್ಯದ ಸಂಸದರು ಈ ಬಗ್ಗೆ ಆಸಕ್ತಿ ತೋರಲಿಲ್ಲ. ಪ್ರಧಾನಿಯನ್ನು ಭೇಟಿಯಾಗಲು ತೆರಳಿದ್ದೆವು. ಸತತ ಎರಡು ತಿಂಗಳಾದರೂ ಭೇಟಿಗೆ ಸಮಯವಕಾಶ ಕೊಡಲಿಲ್ಲ.
ಕೇಂದ್ರ ಸಚಿವರು ಹಾಗೂ ಅಧಿಕಾರಿಗಳು ಸಹ ಭೇಟಿಗೆ ಅವಕಾಶ ನೀಡಲಿಲ್ಲ. ಇದು ಒಕ್ಕೂಟ ವ್ಯವಸ್ಥೆಯಲ್ಲಿ ದುರಂತ. ಚುನಾವಣೆ ವೇಳೆ ಜನರು ಈ ಅಂಶಗಳನ್ನ ಗಮನಿಸಿ ಆಯ್ಕೆ ಮಾಡಬೇಕು. ಸುಳ್ಳು ಹೇಳುವವರ ಬಗ್ಗೆ ಜನರು ಸೂಕ್ಷ್ಮವಾಗಿ ಗಮನಿಸಬೇಕು. ವಾಸ್ತವತೆಯನ್ನ ತಿಳಿದುಕೊಳ್ಳಬೇಕು. ಈ ವಿಚಾರದಲ್ಲಿ ನಾವು ನಮ್ಮ ಪ್ರಯತ್ನ ಮಾಡಿದ್ದೇವೆ ಎಂದು ಕೇಂದ್ರ ಬಿಜೆಪಿ ನಾಯಕರು, ಸಂಸದರ ವಿರುದ್ಧ ಹರಿಹಾಯ್ದರು.