ಸುದ್ದಿಮೂಲ ವಾರ್ತೆ
ಬೆಂಗಳೂರು, ಜೂನ್ 8 : ಕೆಂಪೇಗೌಡ ದಿನಾಚರಣೆಯ ಪ್ರಯುಕ್ತ ಗುರುವಾರ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆ ಮುಂಭಾಗದಲ್ಲಿರುವ ಬಿಬಿಎಂಪಿ ಆಟದ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ 2023-24ನೇ ಸಾಲಿನ ಪಾಲಿಕೆಯ ಅಧಿಕಾರಿಗಳು ಮತ್ತು ನೌಕರರ ಕ್ರೀಡಾ ಕೂಟಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಆಯುಕ್ತರು, ಎಲ್ಲಾ ಪಾಲಿಕೆ ಅಧಿಕಾರಿಗಳು ಮತ್ತು ನೌಕರರು ಹುಮ್ಮಸ್ಸಿನಿಂದ ಕ್ರೀಡಾ ಕೂಟದಲ್ಲಿ ಭಾಗವಹಿಸುತ್ತಿರುವುದು ಹರ್ಷ ತರುವ ವಿಷಯ. ಎಲ್ಲರೂ ಇದೇ ರೀತಿ ಕ್ರೀಡಾ ಹವ್ಯಾಸವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಇದರಿಂದ ನಿಮ್ಮ ಜೀವನ ಶೈಲಿಯು ಶಿಸ್ತು ಬದ್ಧವಾಗಿರುತ್ತದೆ ಹಾಗೂ ನಮ್ಮ ಆರೋಗ್ಯವು ಚೆನ್ನಾಗಿರುತ್ತದೆ ಎಂದು ತಿಳಿಸಿದರು.
ವಿಶೇಷ ಆಯುಕ್ತೆ ಪ್ರೀತಿ ಗೆಹ್ಲೋಟ್ ಮಾತನಾಡಿ, ಸದರಿ ಕ್ರೀಡಾ ಕೂಟವು ಏಳು ದಿನಗಳ ಕಾಲ ನಡೆಯುತ್ತಿದ್ದು, ಪಾಲಿಕೆಯ ಎಲ್ಲಾ ಅಧಿಕಾರಿಗಳು, ನೌಕರರು ಭಾಗವಹಿಸಬೇಕು. ಎಲ್ಲರೂ ದಿನ ನಿತ್ಯದ ಕೆಲಸದ ಒತ್ತಡದಿಂದ ಬಿಡುವು ಮಾಡಿಕೊಂಡು ಭಾಗವಹಿಸಬೇಕು ಇದರಿಂದ ಆರೋಗ್ಯ ವೃದ್ಧಿಯಾಗುವುದು ಎಂದು ತಿಳಿಸಿದರು.
ಈ ಕ್ರೀಡಾ ಕೂಟದ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪ ಆಯುಕ್ತ ಮಂಜುನಾಥ್ ಸ್ವಾಮಿ, ವೆಂಕಟರಾಜು, ಶಿಕ್ಷಣ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.