ಸುದ್ದಿಮೂಲ ವಾರ್ತೆ
ಮೈಸೂರು, ಜು.30: ವ್ಯಕ್ತಿಗೆ ಅಗತ್ಯವಾಗಿ ಬೇಕಾದ ಸಾಮಾಜಿಕ ಬದ್ಧತೆಯನ್ನು ಮೈಗೂಡಿಸಿಕೊಳ್ಳಲು ಸಂವಿಧಾನ ಓದಬೇಕು ಎಂದು ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಹೇಳಿದ್ದಾರೆ.
ಮೈಸೂರು ಜಿಲ್ಲೆಯ ನಂಜನಗೂಡು ಪಟ್ಟಣದಲ್ಲಿ ದಲಿತ ಸಂಘರ್ಷ ಸಮಿತಿ (ದಸಂಸ) ಆಶ್ರಯದಲ್ಲಿ ನಡೆದ ಸಂವಿಧಾನ ಮತ್ತು ಪ್ರಜಾಪ್ರಭುತ್ವ’ ಕುರಿತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನ ಯಾವುದೇ ಭಾಷೆಯಲ್ಲಿ ಓದಿದರೂ ಸುಲಭವಾಗಿ ಅರ್ಥವಾಗುವಂತದ್ದಲ್ಲ. ಭಾರತವನ್ನು ಅರಿಯಬೇಕಾದರೆ, ಸಂವಿಧಾನ ಓದಲೇಬೇಕು. ಎಲ್ಲರೂ ಸಮುದಾಯ, ಬದುಕು, ಬವಣೆಗಳ ಬಗ್ಗೆ ತಿಳಿಯಬೇಕು ಎಂದು ಎಂದರು.
ಶಾಸಕ ದರ್ಶನ್ ಧ್ರುವ ನಾರಾಯಣ್ ಮಾತನಾಡಿ, ನಾನು ಕಿರಿಯ ವಯಸ್ಸಿನಲ್ಲಿ ಶಾಸಕ ಆಗಿದ್ದೀನಿ ಅಂದ್ರೆ, ಅದಕ್ಕೆ ಸಂವಿಧಾನ ಕಾರಣ. ಸಂವಿಧಾನದಿಂದಲೇ ನಮ್ಮೆಲ್ಲರ ಅಸ್ತಿತ್ವ .ನನ್ನ ತಂದೆ (ಧ್ರುವ ನಾರಾಯಣ್) ಸಂತೆಮರಳ್ಳಿ ಕ್ಷೇತ್ರದಲ್ಲಿ ಒಂದು ಮತದಿಂದ ಗೆದ್ದು ಸಂಸದರಾದರು. ಅದು ಕೂಡ ಸಂವಿಧಾನ ಕೊಟ್ಟಿದ್ದು. ಸಂವಿಧಾನ ನಮಗೆ ಬದುಕಲು, ಸಮಾಜದಲ್ಲಿ ಉನ್ನತವಾದ ಸ್ಥಾನಗಳಿಸಲು ಅವಕಾಶ ನೀಡಿದೆ ಎಂದರು.
ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, “ಮಣಿಪುರದಲ್ಲಿ ನಡೆಯುತ್ತಿರುವ ದೌರ್ಜನ್ಯ ರಾಜಕೀಯ ಪ್ರೇರಿತವಾಗಿ ಸೃಷ್ಟಿಯಾಗಿರುವುದು. ಸುಮಾರು 90 ದಿನಗಳೇ ಕಳೆಯುತ್ತಾ ಬಂದಿವೆ. ಆದರೆ, ಪ್ರಧಾನಿ ಇಂದಿಗೂ ತುಟಿ ಬಿಚ್ಚಿಲ್ಲ. ಹೆಣ್ಣಿನ ಬೆತ್ತಲೆ ಮೆರವಣಿಗೆ ನಾಗರೀಕ ಸಮಾಜ ತಲೆ ತಗ್ಗಿಸುವಂತೆ ಮಾಡಿದೆ. ಇಂತಹ ಕ್ರೌರ್ಯ ನಿಜಕ್ಕೂ ಹೇಯ ಕೃತ್ಯ ಎಂದು ಖಂಡಿಸಿದರು.