ಸುದ್ದಿಮೂಲ ವಾರ್ತೆ
ಮೈಸೂರು, ಜೂ. 19: ಶಾಲಾ ಕಾಲೇಜುಗಳಿಗೆ ತೆರಳಲು ನಿಗದಿತ ಸಮಯಕ್ಕೆ ಬಸ್ಗಳಿಲ್ಲ ಎಂದು ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ಸ್ವಯಂ ದೂರು (ಸುಮೊಟೋ) ಅನ್ನು ಉಪಲೋಕಾಯುಕ್ತ ಕೆ.ಎನ್. ಫಣೀಂದ್ರ ಅವರ ಸೋಮವಾರ ದಾಖಲು ಮಾಡಿಕೊಂಡರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕ ಅಹವಾಲು, ಕುಂದುಕೊರತೆ, ದೂರುಗಳ ವಿಚಾರಣೆ ಹಾಗೂ ಪ್ರಕರಣಗಳ ವಿಲೇವಾರಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವೇಳೆ ಬಸ್ ಕೊರತೆ ಬಗ್ಗೆ ದೂರು ನೀಡಿದರು. ಅದರ ಆಧಾರ ಮೇಲೆ ಸ್ವಯಂ ದೂರು ದಾಖಲು ಮಾಡಿಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಬಸ್ಗಳ ಸಂಖ್ಯೆ ಹೆಚ್ಚಿಸಬೇಕಲ್ಲವೇ, ಮುಂದೆ ಇಂತಹ ದೂರುಗಳು ಬಾರದಂತೆ ನೋಡಿಕೊಳ್ಳಿ. ಇಂತಹ ವಿಷಯಗಳಿಗೆ ಲೋಕಾಯುಕ್ತ ಸಂಸ್ಥೆಗೆ ದೂರುಗಳು ಬರಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಲೋಕಾಯುಕ್ತ ಕಾನೂನು ಅಡಿ ಬರುವ ಪ್ರಕರಣಗಳನ್ನು ವಿಚಾರಣೆ ನಡೆಸಿ, ಸೂಕ್ತ ಪರಿಹಾರ ನೀಡಲಾಗುವುದು. ನಮ್ಮ ವ್ಯಾಪ್ತಿಯಲ್ಲಿ ಬಾರೆದೆ ಇರುವ ಪ್ರಕರಣಗಳಾದ ಕೋರ್ಟಿಗೆ ಸಂಬಂಧಿಸಿದ ಪ್ರಕರಣಗಳು, ಮೇಲ್ಮನವಿ ಸಲ್ಲಿಸುವಿಕೆ, ವೈಯಕ್ತಿಕ ದೂರು ಇತ್ಯಾದಿಗಳನ್ನು ಸಂಬಂಧಿಸಿದ ಕಚೇರಿಗಳಲ್ಲಿ ಇತ್ಯರ್ಥಪಡಿಸಿಕೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯಿತಿಗಳ ವ್ಯಾಪ್ತಿಗೆ ಬರುವ ಮನೆಗಳ ಖಾತೆ ಹಂಚಿಕೆ, ಪೌತಿ ಖಾತೆ ಬದಲಾವಣೆ, ಹಕ್ಕು ಪತ್ರ ವಿತರಣೆ, ಚರಂಡಿಗಳ ಸಮಸ್ಯೆ ಇನ್ನಿತರೆ ಸಮಸ್ಯೆಗಳಿಗಳನ್ನು ಗ್ರಾಮ ಪಂಚಾಯಿತಿಯ ಪಿ.ಡಿ.ಒ ಗಳು ಯಾವುದೇ ವಿಳಂಬವಿಲ್ಲದೇ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
ಈ ಸಮಯದಲ್ಲಿ 200 ಕ್ಕೂ ಹೆಚ್ಚು ಪ್ರಕರಣಗಳನ್ನು ಕೈಗೆತ್ತಿಕೊಂಡು ಸ್ಥಳದಲ್ಲಿಯೇ ದೂರುದಾರರು ಮತ್ತು ಎದುರುದಾರರು ನಡುವೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿದರು ಹಾಗೂ ಕೆಲವು ಪ್ರಕರಣಗಳನ್ನು ಇತ್ಯರ್ಥ ಪಡಿಸಲು ಕಾಲಾವಕಾಶವನ್ನು ತೆಗೆದುಕೊಳ್ಳಲಾಯಿತು.
ಕೆಲಸ ಆದಮೇಲೆ ಹಣ ಕೊಡಬೇಕಿಲ್ವ?
ಗುತ್ತಿಗೆದಾರೋರ್ವರು 2021 ರಲ್ಲಿ ಸರ್ಕಾರಿ ಕಾಮಗಾರಿ ಮುಗಿಸಿ ಬಿಲ್ಲುಗಳನ್ನು ನೀಡಿದ್ದರೂ ಹಣ ಪಾವತಿಸುತ್ತಲ್ಲ ಎಂದು ನೀಡಿರುವ ದೂರಿಗೆ ಸಂಬಂಧಿಸಿದಂತೆ ಉಪ ಲೋಕಾಯುಕ್ತರು ಸಂಬಂಧಿಸಿದ ಅಧಿಕಾರಿಗಳಿಗೆ ಕೆಲಸ ಆದಮೇಲೆ ಗುತ್ತಿಗೆದಾರರಿಗೆ ಹಣ ನೀಡಬೇಕಲ್ವ ಎಂದರು
ಕೆಲವು ಪ್ರಕರಣಗಳಲ್ಲಿ ದೂರುದಾರರು ಮತ್ತು ಎದುರುದಾರರು ಗೈರುಹಾಜರಾಗಿದ್ದರು ಹಾಗೂ ಗೈರುಹಾಜರಾದ ಕೆಲವು ಸರ್ಕಾರಿ ನೌಕರರಿಗೆ ಷೋಕಾಸ್ ನೋಟಿಸನ್ನು ಜಾರಿಮಾಡಲಾಯಿತು ಮತ್ತು ಕೆಲವು ಪೊಲೀಸರ ಮೇಲಿನ ದೂರುಗಳನ್ನು ಪೊಲೀಸ್ ಕಮಿಷರ್ ಅವರ ಉಪಸ್ಥಿತಿಯಲ್ಲಿ ಇತ್ಯರ್ಥ ಪಡಿಸಿಕೊಳ್ಳುವಂತೆ ತಿಳಿಸಿದರು.
ಕೆ.ಆರ್.ನಗರ, ನಂಜನಗೂಡು, ಪಿರಿಯಾಪಟ್ಟಣ, ಹೆಚ್.ಡಿ.ಕೋಟೆ, ಮೈಸೂರು ತಾಲ್ಲೂಕು, ಹುಣಸೂರು ಸೇರಿದಂತೆ ಜಿಲ್ಲೆಯ ಇನ್ನಿತರೆ ತಾಲ್ಲೂಕುಗಳಿಗೆ ಸೇರಿದ ಜನರು ಉಪ-ಲೋಕಾಯುಕ್ತರ ಮುಂದೆ ತಮ್ಮ ಅಹವಾಲುಗಳನ್ನು ಲಿಖಿತ ರೂಪದಲ್ಲಿ ಸಲ್ಲಿಸಿ ಪರಿಹಾರ ಕಂಡುಕೊಂಡರು.
ಲೋಕಾಯುಕ್ತದ ಅಪರ ನಿಬಂಧಕ ಅಮರ ನಾರಾಯಣ,ಉಪ ನಿಭಂಧಕ ಚನ್ನಕೇಶವ ರೆಡ್ಡಿ ಜಿಲ್ಲಾಧಿಕಾರಿ ಡಾ.ಕೆ. ರಾಜೇಂದ್ರ, ಜಿಪಂ ಸಿಇಓ ಕೆ.ಎಂ.ಗಾಯತ್ರಿ, ಮಹಾನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ ರೆಡ್ಡಿ, ಜಿಲ್ಲಾ ಎಸ್ಪಿ ಸೀಮಾ ಲಾಟ್ಕರ್ ಅವರು ಸೇರಿದಂತೆ ನಾನಾ ಇಲಾಖೆಗಳ ಅಧಿಕಾರಿಗಳು ಇದ್ದರು.