ಸುದ್ದಿಮೂಲ ವಾರ್ತೆ
ಬೆಂಗಳೂರು,ಅ.28: ಆಂಗ್ಲಭಾಷೆಯಲ್ಲಿರುವ ಅಮೂಲ್ಯ ಕೃತಿಗಳು ಕನ್ನಡಕ್ಕೆ ತರ್ಜುಮೆ ಮಾಡಿದರೆ ಕನ್ನಡದ ಜ್ಞಾನ ಬಂಢಾರ ವೃದ್ಧಿಸುತ್ತದೆ ಎಂದು ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ.
ವಿಲ್ಸನ್ ಗಾರ್ಡನ್ ಎಜುಕೇಶನ್ ಸೊಸೈಟಿಯಿಂದ ಹೊಂಬೇಗೌಡ ಪ್ರೌಢ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಖ್ಯಾತ ಮನೋವೈದ್ಯ ಡಾ. ಕೆ.ಎಲ್. ರೆಡ್ಡಿ ಅವರ “ಇಮ್ಮಾರ್ಟಾಲಿಟಿ ಅಂಡ್ ಪರ್ಪಸ್” ಮತ್ತು “ಅಮರತ್ವ ಮತ್ತು ಜೀವನದ ಉದ್ದೇಶ” ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಡಾ. ಕೆ.ಎಲ್. ರೆಡ್ಡಿ ಅವರು ಎಲ್ಲಾ ಕ್ಷೇತ್ರದಲ್ಲೂ ಪರಿಣಿತರಿದ್ದು, ಅವರ ಸಾಹಿತ್ಯ ಅನುವಾದ ಮಾಡಿದರೆ ಕನ್ನಡ ಭಾಷೆಗೆ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ ಎಂದರು.
ಡಾ. ಕೆ.ಎಲ್. ರೆಡ್ಡಿ ಅವರು ವಿದೇಶಕ್ಕೆ ತೆರಳಿ ಅಪಾರ ಸಾಧನೆ ಮಾಡಿದ್ದಾರೆ. ಜಗತ್ತಿಗೆ ಉತ್ತಮ ಮಾರ್ಗದರ್ಶನ ಮಾಡಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ. ಎಲ್ಲಾ ಕ್ಷೇತ್ರದಲ್ಲಿ ಅಧ್ಯಯನ ಮಾಡಿರುವ ಸಾಧನೆ ಕನ್ನಡಿಗರ ಮನೆ ಮತ್ತು ಮನಗಳನ್ನು ಮುಟ್ಟಬೇಕು ಎಂದರು.
ಮಾಜಿ ರಾಜ್ಯ ಸಭಾ ಸದಸ್ಯ ಕುಪೇಂದ್ರ ರೆಡ್ಡಿ ಮಾತನಾಡಿ, ಪೀಳಿಗೆಯಿಂದ ಪೀಳಿಗೆಗೆ ನಮ್ಮ ಸಮಾಜದಲ್ಲಿರುವ ಮೌಢ್ಯಗಳನ್ನು ಮುಂದುವರೆಸಿಕೊಂಡು ಹೋಗುವುದು ಅರ್ಥಹೀನವಾಗಿದ್ದು, ವೈಜ್ಞಾನಿಕ ದೃಷ್ಟಿಕೋನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕೃತಿ ಕುರಿತು ಮಾತನಾಡಿದ ಕೆ.ಎಸ್.ಆರ್.ಟಿ.ಸಿಯ ನಿವೃತ್ತ ಅಧಿಕಾರಿ ಎಸ್.ವಿ. ಮಾರಪ್ಪ, ಮನೋ ವೈದ್ಯ ಕೆ.ಎಲ್. ರೆಡ್ಡಿ ಅವರು ಪ್ರಪಂಚ ಪರ್ಯಟನೆ ಮಾಡಿ ಚಿರಂತರತೆ, ಅಮರತ್ವ. ದೈವೀ ಕೃಪೆಯಿಂದ ಬದುಕಿನಲ್ಲಿ ಚಿರಂತರನೆಯನ್ನು ಹೇಗೆ ಪಡೆಯಬಹುದು ಎಂದು ವಿಶ್ಲೇಷಿಸಿದ್ದಾರೆ. ಶೇ 50 ಕ್ಕಿಂತ ಅಧಿಕ ವಿಜ್ಞಾನದ ವಿಕಾಸತ್ವದ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮೌಢ್ಯತೆಯನ್ನು ಗೆಲ್ಲುವ ಬಗ್ಗೆ. ನೋವು ಮತ್ತು ಯಾತನೆಗಳನ್ನು ಗೆಲ್ಲುವ ಪ್ರಯತ್ನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ ಎಂದರು.
ಹಿರಿಯ ವಕೀಲ ಕೆ.ಎನ್. ಸುಬ್ಬಾರೆಡ್ಡಿ, ನಿವೃತ್ತ ಟಿ.ಎಸ್. ರಘುನಾಥ್, ಡಾ. ಅನಿಲ್ ರೆಡ್ಡಿ, ಪಿ, ರಾಮಪ್ರಸಾದ್ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.