ಮೈಸೂರು, ಅ.15: ಚಾಮುಂಡಿಬೆಟ್ಟದ ಮೇಲೆ ನಾಡಹಬ್ಬ ದಸರಾ ಉತ್ಸವ ಆರಂಭವಾಗುತ್ತಿದ್ದಂತೆ ಇತ್ತ ಬೆಟ್ಟದ ಕೆಳಗಿರುವ ಅರಮನೆಯೊಳಗೆ ರಾಜವಂಶಸ್ಥರಿಂದ ಕಣ್ಮನ ಸೆಳೆಯುವ ರಾಜ ವೈಭವವನ್ನು ಬಿಂಬಿಸುವ ಖಾಸಗಿ ದರ್ಬಾರ್ ಭಾನುವಾರ ಮುಂಜಾನೆಯಿಂದಲೇ ಆರಂಭವಾಯಿತು. ಮೈಸೂರು ಅರಸರ ಅಧಿದೇವತೆ ಚಾಮುಂಡಿ. ಈ ಕಾರಣಕ್ಕಾಗಿ ಅರಮನೆ ಮುನ್ನೋಟ ಬೆಟ್ಟದ ಕಡೆ ಇರುವಂತೆ ನಿರ್ಮಿಸಲಾಗಿದೆ. ಹಿಂದೆ ಇದೇ ನವರಾತ್ರಿಯ ವೇಳೆ ಮಳೆ ಇಲ್ಲದಿದ್ದರೆ ಚಾಮುಂಡಿಯಲ್ಲಿ ಪ್ರಾರ್ಥನೆ ಮಾಡಿ ಮಳೆ ತರಿಸುತ್ತಿದ್ದರು ಎಂಬ ಪ್ರತೀಕ ಇವೆ.
ಐತಿಹಾಸಿಕ ದಸರಾದೊಟ್ಟಿಗೆ ಯದುವಂಶಜರ ಖಾಸಗಿ ದರ್ಬಾರ್ ಕೂಡ ಮಿಲನವಾಗಿದೆ. ಶತಮಾನಗಳಿಂದ ನಡೆಯುತ್ತಿರುವ ಖಾಸಗಿ ದರ್ಬಾರ್ ಅನ್ನು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸಿಂಹಾಸನಾರೂಢವಾಗುವ ಮೂಲಕ ಖಾಸಗಿ ದರ್ಬಾರ್ ಆರಂಭಿಸಿದರು.
ಎಂಟನೇ ಬಾರಿಗೆ ಖಾಸಗಿ ದರ್ಬಾರ್ ನಡೆಸುತ್ತಿರುವ ಯದುವೀರ್ ಒಡೆಯರ್ ಅವರು ಪೂಜೆಗಳಲ್ಲಿ ಮುಂಜಾನೆಯಿಂದಲೇ ಭಾಗಿಯಾದರು ಬೆಳಗ್ಗೆ 5ರಿಂದಲೇ ಅರಮನೆಯಲ್ಲಿ ಪೂಜಾ ವಿಧಾನಗಳು ಆರಂಭವಾಗಿ, ಚಂಡಿಕಾಹೋಮ, ಲಲಿತಾ ಸಹಸ್ರನಾಮ ಸಹಿತ ನಾನಾ ಪೂಜೆಗಳು ನೆರವೇರಿದವು. ರಾಜವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಹಾಗೂ ಸಂಸ್ಥಾನದವರು, ಅರಸು ಮನೆತನಗಳ ಹಿರಿಯರು ಭಾಗಿಯಾದರು.
ಬೆಳಗ್ಗೆ 07.05 ರಿಂದ 7.45ರ ಶುಭ ಲಗ್ನದಲ್ಲಿ ವಾಣಿವಿಲಾಸ ಅರಮನೆಯಲ್ಲಿ ಕಂಕಣಧಾರಣೆ ನೆರವೇರಿಸಲಾಯಿತು.ಇನ್ನು ಬೆಳಗ್ಗೆ 9.45ಕ್ಕೆ ಅರಮನೆ ಸವಾರಿ ತೊಟ್ಟಿಗೆ ಗೋಶಾಲೆಗೆ ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಆನೆ, ಪಟ್ಟದ ಹಸು ಆಗಮನವಾದವು. ಬೆಳಗ್ಗೆ 10.15ಕ್ಕೆ ಕಳಸ ಪೂಜೆ, ಸಿಂಹಾಸನ ಪೂಜೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಸಿಂಹಾಸನಾರೂಢರಾದ ಯದುವೀರ್ 11.50ರವರೆಗೆ ಖಾಸಗಿ ದರ್ಬಾರ್ ಮುಂದುವರೆಸಿದರು
ಮೊಳಗಿದ ಘೋಷಣೆಗಳು.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರಾಜಗಾಂಭೀರ್ಯದಿಂದ ಸಿಂಹಾನದ ಕಡೆ ಹೆಜ್ಜೆ ಇಡುತ್ತಿದ್ದಂತೆ ವಂಧಿ ಮಾಗಧರು ರಾಜಾಧಿರಾಜ, ರಾಜ ಮಾರ್ತಾಂಡ, ರಾಜ ಕುಲತಿಲಕ, ರಾಜ ಮಾರ್ತಾಂಡ, ಯದುವೀರ್ ಮಹಾರಾಜ್ ಕೀ ಬಹು ಪರಾಕ್, ಬಹು ಪರಾಕ್ ಎಂದು ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಕೆಲವೇ ಕ್ಷಣಗಳಲ್ಲಿ ಬಹುಪರಾಕ್ ಹೇಳಿದರು. ಇದಕ್ಕೆ ಅಲ್ಲಿದ್ದವರೂ ದನಿಗೂಡಿದರು. ನಂತರ ಮೈಸೂರು ರಾಜ್ಯ ಗೀತೆಯನ್ನು ನುಡಿಸಲಾಯಿತು,. ಈ ವೇಳೆ ರತ್ನ ಖಚಿತ ಸಿಂಹಾಸನದ ಮೇಲೆ ನಿಂತ ಯದುವೀರ್ ಸೆಲ್ಯೂಟ್ ಮಾಡಿ ರಾಜ್ಯ ಗೀತೆಗೆ ಗೌರವ ಸಲ್ಲಿಸಲಿಸಿದರು.
ಹಿಂದೆ ರಾಜ ಮಹಾರಾಜರು ನಡೆಸುತ್ತಿದ್ದ ದರ್ಬಾರ್ ಮಾದರಿಯಲ್ಲೇ ಇಂದಿಗೂ ದಸರೆಯ ಸಂದರ್ಭದಲ್ಲಿ ಸಂಪ್ರದಾಯ ಬದ್ಧವಾಗಿ ಅರಮನೆಯಲ್ಲಿ ರಾಜವಂಶಸ್ಥರು ಖಾಸಗಿ ದರ್ಬಾರ್ ನಡೆಸುತ್ತಿದ್ದಾರೆ. ಸಿಂಹಾಸನದ ಬಳಿ ತೆರಳಿದ ಯದುವೀರ್ ಮೂರು ಬಾರಿ ಪ್ರದಕ್ಷಿಣೆ ಹಾಕಿ, ಸಿಂಹಾಸನಕ್ಕೆ ಪೂಜೆ ಸಲ್ಲಿಸಿ, ಮಂಗಳಾರತಿ ಮಾಡಿದರು.
ಸಿಂಹಾಸನದ ಪಕ್ಕದಲ್ಲೇ ಕುಳಿತು ನವಗ್ರಹ ಪೂಜೆ ಸೇರಿದಂತೆ ವಿವಿಧ ಪೂಜೆಗಳನ್ನು ನೆರವೇರಿಸಿ, ನಂತರ ಅವರು ಸಿಂಹಾಸನಾರೂಢರಾದರು. ಇದೇ ವೇಳೆ ಪತ್ನಿ ತ್ರಿಷಿಕಾ ಕುಮಾರಿ ಯದುವೀರ್ ಪಾದಗಳಿಗೆ ಪುಷ್ಪಾರ್ಚನೆ ಮಾಡಿದ ಬಳಿಕ ದಿವಾನರು ಸಿಂಹಾಸನದ ಮುಂದೆ ನಿಂತು ನಡುಬಾಗಿಸಿ ವಂದಿಸುವ ಚಟುವಟಿಕೆಗಳೂ ನಡೆದವು.
ದರ್ಬಾರ್ ಮುಗಿದ ಬಳಿಕ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ, ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯ, ಶ್ರೀರಂಗಪಟ್ಟಣದ ಶ್ರೀರಂಗನಾಥ, ಉತ್ತನಹಳ್ಳಿ ಜ್ವಾಲಾಮುಖಿ ತ್ರಿಪುರ ಸುಂದರಿದೇವಿ, ಅರಮನೆಯ ಆವರಣದಲ್ಲಿರುವ ತ್ರಿನೇಶ್ವರ, ಕೋಡಿ ಸೋಮೇಶ್ವರ, ಕೋಟೆ ಆಂಜನೇಯಸ್ವಾಮಿ, ಗಣೇಶ ದೇವಾಲಯ, ಕೃಷ್ಣನ ದೇವಾಲಯ ಸೇರಿದಂತೆ 33 ದೇವಾಲಯಗಳಿಂದ ತಂದ ತೀರ್ಥ ಪ್ರಸಾದ ಸೇವಿಸಿದ ನಂತರ ಸಿಂಹಾಸನಾರೂಢ ಚಟುವಟಿಕೆಗಳು ಮುಗಿದವು. ಮಧ್ಯಾಹ್ನ 1.45 ರಿಂದ 02.05 ತಾಯಿ ಚಾಮುಂಡೇಶ್ವರಿ ಫೋಟೋ ಚಾಮುಂಡಿ ತೊಟ್ಟಿಯಿಂದ ಕನ್ನಡಿ ತೊಟ್ಟಿಗೆ ರವಾನಿಸಲಾಯಿತು. ಇದಲ್ಲದೇ ಸೋಮವಾರ ಬೆಳಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ಅರಮನೆ ಪ್ರವೇಶ ನಿರ್ಬಂಧ ಹೇರಲಾಗಿದೆ.
ಈ ಬಾರಿ ಬರದ ನಡುವೆ ಸಾಂಪ್ರದಾಯಿಕವಾಗಿ ದಸರಾ ಆಚರಣೆ ನಡೆಸಲಾಗುತ್ತಿದೆ.